ಪ್ರಧಾನಿ, ಮುಖ್ಯಮಂತ್ರಿ ಪದಚ್ಯುತಿ ಮಸೂದೆ ಮಂಡನೆಗೆ ಆಕ್ರೋಶ
ನವದೆಹಲಿ, ಆ. ೨೦: ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ಕನಿಷ್ಟ ಐದು ವರ್ಷಗಳ ಜೈಲು ಶಿಕ್ಷೆಗೆ ಅರ್ಹವಾದ ಅಪರಾಧಗಳಲ್ಲಿ ಬಂಧನಕ್ಕೊಳಗಾಗಿ, ಸತತ ೩೦ ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ಅವರ ಹುದ್ದೆಯಿಂದ ತೆಗೆದುಹಾಕುವ ಮೂರು ಮಸೂದೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಇಂದು ಮಂಡಿಸಿದರು. ಸಚಿವರು ವಿಧೇಯಕ ಮಂಡಿಸುತ್ತಿದ್ದAತೆ ವಿರೋಧಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಮಸೂದೆಗಳ ಪ್ರತಿಗಳನ್ನು ಹರಿದುಹಾಕಿ ಅಮಿತ್ ಶಾ ಮೇಲೆ ಎಸೆದರು. ಎಐಎಂಐಎAನ ಅಸಾದುದ್ದೀನ್ ಓವೈಸಿ ಮತ್ತು ಕಾಂಗ್ರೆಸ್‌ನ ಮನೀಷ್ ತಿವಾರಿ ಮತ್ತು ಕೆ.ಸಿ. ವೇಣುಗೋಪಾಲ್ ಸೇರಿದಂತೆ ಸೇರಿದಂತೆ ಹಲವು ವಿರೋಧ ಪಕ್ಷಗಳ ಸದಸ್ಯರು ಮಸೂದೆ ವಿರುದ್ಧ ಮಾತನಾಡಿದರು. ಉದ್ದೇಶಿತ ವಿಧೇಯಕ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು. ತರಾತುರಿಯಲ್ಲಿ ಮಸೂದೆ ಮಂಡಿಸಲಾಗುತ್ತಿದೆ ಎಂಬ ಟೀಕೆಗಳನ್ನು ತಳ್ಳಿಹಾಕಿದ ಅಮಿತ್ ಶಾ, ಅವುಗಳನ್ನು ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲಾಗುವುದು, ಅಲ್ಲಿ ಪ್ರತಿಪಕ್ಷಗಳು ಸೇರಿದಂತೆ ಉಭಯಸದನಗಳ ಸದಸ್ಯರು ತಮ್ಮ ಸಲಹೆಗಳನ್ನು ನೀಡಲು ಅವಕಾಶವಿದೆ ಎಂದು ಹೇಳಿದರು.
ದೆಹಲಿ ಸಿಎಂಗೆ ಕಪಾಳಮೋಕ್ಷ
ನವದೆಹಲಿ, ಆ. ೨೦: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ್ದಾನೆ. ದೆಹಲಿಯ ಸಿವಿಲ್ ಲೈನ್ಸ್ನಲ್ಲಿರುವ ಅಧಿಕೃತ ನಿವಾಸದಲ್ಲಿ ಬುಧವಾರ ಸಾಪ್ತಾಹಿಕ ‘ಜನ ಸುನ್‌ವಾಯೀ’ ಕಾರ್ಯಕ್ರಮದ ವೇಳೆ ಈ ದಾಳಿ ನಡೆದಿದೆ. ೩೫ ವರ್ಷದ ವ್ಯಕ್ತಿಯೊಬ್ಬ ಈ ಕೃತ್ಯ ಎಸಗಿದ್ದು, ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ದಾಳಿಯನ್ನು ದೆಹಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚ್‌ದೇವ ಹಾಗೂ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ಖಂಡಿಸಿದ್ದಾರೆ. ಇದೊಂದು ದುರದೃಷ್ಟಕರ ಘಟನೆ. ಇದು ದೆಹಲಿಯ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ರಾಷ್ಟç ರಾಜಧಾನಿಯಲ್ಲಿ ಮುಖ್ಯಮಂತ್ರಿಯೇ ಸುರಕ್ಷಿತವಾಗಿಲ್ಲ ಎಂದಾದರೆ, ಸಾಮಾನ್ಯ ಜನರ ಕಥೆಯೇನು ಎಂದು ದೇವೇಂದ್ರ ಪ್ರಶ್ನಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ರಾಧಾಕೃಷ್ಣನ್
ನವದೆಹಲಿ, ಆ. ೨೦: ರಾಷ್ಟಿçÃಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರು ಭಾರತದ ಉಪರಾಷ್ಟçಪತಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಸಂಸತ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಉಪ ರಾಷ್ಟçಪತಿ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದಾರೆ. ನಾಲ್ಕು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಲಾಗಿದ್ದು, ತಲಾ ೨೦ ಪ್ರತಿಪಾದಕರು ಮತ್ತು ೨೦ ಅನುಮೋದಕರ ಸಹಿಗಳಿವೆ. ಪ್ರಧಾನಿ ಮೋದಿ ಜೊತೆಗೆ, ಕೇಂದ್ರ ಸಚಿವರು, ಹಿರಿಯ ಸಂಸದರು ಮತ್ತು ಪ್ರಮುಖ ಮೈತ್ರಿಕೂಟದ ನಾಯಕರ ಹೆಸರನ್ನು ದಾಖಲೆಗಳಲ್ಲಿ ಹೆಸರಿಸಲಾಗಿದೆ.
ಗ್ರಾಮೀಣ ಸೇವೆ ಕಡ್ಡಾಯ - ತಿದ್ದುಪಡಿ ಕಾಯ್ದೆಗೆ ಅನುಮೋದನೆ
ಬೆಂಗಳೂರು, ಆ. ೨೦: ನಗರ ಪ್ರದೇಶಗಳಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್ಗಳು ಸೇರಿದಂತೆ ಇತರ ಸಿಬ್ಬಂದಿ ಮುಂದೆ ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಕಾಯ್ದೆ ವಿಧಾನಪರಿಷತ್‌ನಲ್ಲಿ ಅಂಗೀಕಾರಗೊAಡಿತು. ತಿದ್ದುಪಡಿ ವಿಧೇಯಕ ಮಂಡಿಸಿ ಮಾತನಾಡಿದ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ನಗರ ಪ್ರದೇಶಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ನರ್ಸ್ಗಳು, ಡಿ ಗ್ರೂಪ್ ಸಿಬ್ಬಂದಿ ದೀರ್ಘಕಾಲದವರೆಗೂ ಒಂದೇ ಕಡೆ ಕೆಲಸ ಮಾಡುತ್ತಿದ್ದಾರೆ. ಪಾರದರ್ಶಕತೆ ತರುವ ಸಲುವಾಗಿ ಇವರನ್ನು ವರ್ಗಾವಣೆ ಮಾಡಿದರೆ ನ್ಯಾಯಾಲಯದ ಮೊರೆಹೋಗಿ ವರ್ಗಾವಣೆಗೆ ತಡೆಯಾಜ್ಞೆ ತರುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಇತರ ಸಿಬ್ಬಂದಿ ಕೊರತೆ ಉಂಟಾಗುತ್ತಿತ್ತು. ಇದನ್ನು ಸರಿದೂಗಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದರು.
ಕಟ್ಟಡ ಕುಸಿದು ಮೂವರ ಸಾವು
ನವದೆಹಲಿ, ಆ. ೨೦: ದೆಹಲಿಯ ದರಿಯಾಗಂಜ್‌ನ ಸದ್ಭಾವನಾ ಪಾರ್ಕ್ ಬಳಿ ಬುಧವಾರ ಕಟ್ಟಡವೊಂದು ಕುಸಿದು ಬಿದ್ದಿದ್ದು, ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಇಂದು ಮಧ್ಯಾಹ್ನ ೧೨.೧೪ ಕ್ಕೆ ಮಾಹಿತಿ ಬಂದಿದ್ದು, ಮೂರು ಮಹಡಿಗಳ ಕಟ್ಟಡ ಕುಸಿದು ಬಿದ್ದಿದ್ದು, ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದಳದ ವಾಹನಗಳನ್ನು ರವಾನಿಸಿ ಕ್ರಮವಹಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ (ಡಿಎಫ್‌ಎಸ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವಶೇಷಗಳಿಂದ ಮೂವರನ್ನು ರಕ್ಷಿಸಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದ್ದಾರೆ.
ದ್ವೇಷ ಭಾಷಣ - ಅಬ್ಬಾಸ್ ಅನ್ಸಾರಿ ಶಿಕ್ಷೆ ವಜಾ
ಪ್ರಯಾಗ್‌ರಾಜ್, ಆ. ೨೦: ೨೦೨೨ರ ದ್ವೇಷ ಭಾಷಣ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿ ಅವರ ಮಗ ಅಬ್ಬಾಸ್ ಅನ್ಸಾರಿ ಅವರ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಬುಧವಾರ ವಜಾ ಮಾಡಿದೆ. ೨ ವರ್ಷ ಕಠಿಣ ಸೆರೆವಾಸ ಶಿಕ್ಷೆ ವಿಧಿಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ಸಮೀರ್ ಜೈನ್ ರದ್ದು ಮಾಡಿದ್ದಾರೆ. ೨೦೦೨ ಮೇ ೩೧ರ ಚುನಾವಣಾ ಪ್ರಚಾರದ ವೇಳೆ ದ್ವೇಷ ಭಾಷಣಕ್ಕೆ ಸಂಬAಧಿಸಿದAತೆ ಮೌನದಲ್ಲಿರುವ ವಿಶೇಷ ನ್ಯಾಯಾಲಯ ಅನ್ಸಾರಿಗೆ ಶಿಕ್ಷೆ ವಿಧಿಸಿತ್ತು. ಶಿಕ್ಷೆ ರದ್ದು ಕೋರಿ ಅಬ್ಬಾಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಮೌಸದರ್ ವಿಧಾನಸಭಾ ಕ್ಷೇತ್ರದ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಆಗಿನ ಶಾಸಕರಾಗಿದ್ದ ಅಬ್ಬಾಸ್ ಅನ್ಸಾರಿ, ೨೦೨೨ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಪರಿಣಾಮ ಎದುರಿಸುತ್ತೀರಿ ಎಂದು ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದರು.