ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಆ. ೨೦: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಶವಗಳ ಹೂಳುವಿಕೆ ಪ್ರಕರಣವು ದೇಶಾದ್ಯಂತ ದೊಡ್ಡ ಪ್ರಮಾಣದ ಸುದ್ದಿ ಆಗಿದೆ. ಮುಸುಕುದಾರಿಯೊಬ್ಬ ಹೇಳಿದಷ್ಟು ಜಾಗಗಳಲ್ಲಿ ಅಗೆದಷ್ಟೂ ಮಣ್ಣು ಸಿಕ್ಕಿದೆ ಹೊರತು ಆತ ಹೇಳಿಕೊಂಡಿದ್ದ ನೂರಾರು ಮಹಿಳೆಯರ ಶವಗಳ ಅವಶೇಷಗಳಂತೂ ಸಿಕ್ಕಿಲ್ಲ. ಹಾಗಾಗಿ ಎಸ್.ಐ.ಟಿ ಸದ್ಯಕ್ಕೆ ಉತ್ಖನನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಮುಸುಕುದಾರಿಯ ವಿಚಾರಣೆಯತ್ತ ಗಮನಹರಿಸಿದೆ.

ಈ ನಡುವೆ ಮಣಿಪಾಲದಲ್ಲಿ ಮೊದಲ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಆಗಿದ್ದ ತಮ್ಮ ಮಗಳು ಅನನ್ಯ ಭಟ್ ೨೦೦೩ರಲ್ಲಿ ಧರ್ಮಸ್ಥಳಕ್ಕೆ ಸ್ನೇಹಿತೆಯರೊಂದಿಗೆ ಬಂದು ನಾಪತ್ತೆ ಆಗಿರುವುದಾಗಿ ತಾಯಿ ಸುಜಾತಾ ಭಟ್ ಕೆಲ ದಿನಗಳ ಹಿಂದೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶವಗಳ ಅವಶೇಷಗಳಿಗೋಸ್ಕರ ಅಗೆಯುವಾಗ ತಮ್ಮ ಮಗಳ ಮೂಳೆ ಸಿಕ್ಕರೆ ತಮಗೆ ಕೊಡಬೇಕು ಎಂದು ಎಸ್‌ಐಟಿಗೆ ಮನವಿ ಮಾಡಿಕೊಂಡಿದ್ದಾರೆ. ಸುಜಾತಾ ಭಟ್ ಅವರು ದೂರು ನೀಡಿರುವುದು ಬಿಟ್ಟರೆ ಎಸ್‌ಐಟಿಗೆ ಯಾವುದೇ ರೀತಿಯ ಫೋಟೋ, ವಿದ್ಯಾಭ್ಯಾಸದ ದಾಖಲೆ ಏನನ್ನೂ ನೀಡಿಲ್ಲ. ಇವರ ಹೇಳಿಕೆಯ ಕುರಿತು ಎಸ್‌ಐಟಿ ಹಾಗೂ ಮಾಧ್ಯಮಗಳು ಸಂಶಯ ವ್ಯಕ್ತ ಪಡಿಸಿದ ಬೆನ್ನಲ್ಲೇ ಭಾನುವಾರ ಮಾಧ್ಯಮಗಳಿಗೆ ಹುಡುಗಿಯೊಬ್ಬಳ ಫೋಟೋ ನೀಡಿ ಇವಳೇ ತನ್ನ ಮಗಳು ಎಂದು ಹೇಳಿಕೊಂಡಿದ್ದಾರೆ.

ಆದರೆ ಈ ಕುರಿತು ತನಿಖೆ ನಡೆಸಿದಾಗ ಅವರು ಬಿಡುಗಡೆ ಮಾಡಿರುವ ಫೋಟೋ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದ ಮಾಳೇಟಿರ ವಸಂತಿ ಎಂಬುವವರದ್ದಾಗಿದೆ ಎಂದು ತಿಳಿದು ಬಂದಿದೆ. ವಸಂತಿ ಅವರು ಮೊದಲು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಇಂಟೀರಿಯರ್ ಡಿಸೈನರ್ ಶ್ರೀವತ್ಸ ಭಟ್ ಎಂಬುವವರನ್ನು ೨೦೦೭ರಲ್ಲಿ ಮದುವೆ ಆಗಿದ್ದರು. ಬೆಂಗಳೂರಿನಲ್ಲಿಯೇ ಇದ್ದ ವಸಂತಿ ೫-೯-೨೦೦೭ ರಂದು ಕಾಣೆಯಾಗಿದ್ದಾರೆ ಎಂದು ಪೋಲೀಸ್ ಠಾಣೆಯಲ್ಲಿ ಕುಟುಂಬದವರು ದೂರು ದಾಖಲಿಸಿದ್ದರು.

ಈ ಕುರಿತು ಮಾಹಿತಿ ನೀಡಿರುವ ವೀರಾಜಪೇಟೆಯ ನಿವಾಸಿ ವಸಂತಿ ಅವರ ಸಹೋದರ ವಿಜಯ್ ಪೊನ್ನಪ್ಪ ಅವರು, ಸಾಮಾಜಿಕ ತಾಣ ಹಾಗೂ ಮಾಧ್ಯಮಗಳಲ್ಲಿ ಬಳಕೆ ಆಗುತ್ತಿರುವ ಫೋಟೋ ತಮ್ಮ ಸಹೋದರಿಯದ್ದೇ ಎಂದು ಖಚಿತ ಪಡಿಸಿದ್ದಾರೆ. ವಸಂತಿ ಕಾಣೆಯಾದ ೨೫ ದಿನಗಳ ನಂತರ ವೀರಾಜಪೇಟೆ ಸಮೀಪದ ಕೊಟ್ಟೋಳಿ ಹೊಳೆಯಲ್ಲಿ ಮೃತದೇಹ ಪತ್ತೆ ಆಗಿತ್ತು. ವಿಜಯ್ ಅವರು ಆಗ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಶವದ ಮೇಲಿನ ಬಟ್ಟೆಗಳ ಹಾಗೂ ಶವದ ಚಿತ್ರದ ಆಧಾರದಲ್ಲಿ ಕುಟುಂಬಸ್ಥರು ಮೃತ ದೇಹವನ್ನು ಗುರುತಿಸಿದ್ದರು.

ಅಲ್ಲದೆ ಆಕೆಯ ಕುತ್ತಿಗೆಯಲ್ಲಿದ್ದ ತಾಳಿಯ ಗುರುತಿನಿಂದಲೂ ಶವ ಗುರುತಿಸುವುದು ಸುಲಭವಾಗಿತ್ತು. ಆ ಶವವನ್ನು ಪೊಲೀಸರೇ ಅಂತ್ಯ ಸಂಸ್ಕಾರ ಮಾಡಿದ್ದರು. ಇದೀಗ ಸುಜಾತಾ ಭಟ್ ತಮ್ಮ ಸಹೋದರಿಯನ್ನು ತಮಗೆ ಮೊದಲೇ ಹುಟ್ಟಿದ ಮಗಳು ಎಂದು ಹೇಳಿಕೊಳ್ಳುತ್ತಿರುವುದಕ್ಕೆ ವಿಜಯ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾರೇ ಆಗಲಿ ತಮ್ಮ ಸ್ವಾರ್ಥ ಸಾಧನೆಗಾಗಿ ಫೋಟೋದ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ. ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ. ವಸಂತಿ ಅವರ ಇನ್ನೂ ಹತ್ತಾರು ಫೋಟೋಗಳು ತಮ್ಮ ಬಳಿ ಇದ್ದು ಈಗ ಸುಜಾತಾ ಬಿಡುಗಡೆ ಮಾಡಿರುವ ಫೋಟೋ ಬೆಂಗಳೂರಿನ ಗಂಡನ ಮನೆಯಿಂದ ತೆಗೆದುಕೊಂಡಿರಬಹುದೆAದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ವಸಂತಿ ಅವರು ಪ್ರೀತಿಸಿದ್ದ ವ್ಯಕ್ತಿಯೊಂದಿಗೆ ಕುಟುಂಬಸ್ಥರ ಒಪ್ಪಿಗೆ ಮೇಲೆ ೨೦೦೭ರಲ್ಲಿ ಮದುವೆಯಾಗಿತ್ತು. ಅದೇ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಆಕೆ ನಾಪತ್ತೆಯಾಗಿದ್ದು, ೨೫ ದಿನಗಳ ಬಳಿಕ ಶವ ಸಿಕ್ಕಿತು. ಪೊಲೀಸ್ ಪ್ರಕರಣ ದಾಖಲಾಗಿ ಪೊಲೀಸರೇ ಅಂತ್ಯಕ್ರಿಯೆ ನಡೆಸಿದ್ದರು. ವೈದ್ಯಕೀಯ ವರದಿಗಳ ಪ್ರಕಾರ ಅದು ಆತ್ಮಹತ್ಯೆ ಎಂದು

(ಮೊದಲ ಪುಟದಿಂದ) ಎಂದು ಬಹಿರಂಗಗೊAಡಿತ್ತು ಎಂಬುದಾಗಿ ಸಹೋದರ ವಿಜಯ್ ವಿವರಿಸುತ್ತಾರೆ, ಆಕೆಯ ದೇಹದ ಮೇಲೆ ಸುಟ್ಟ ಗಾಯದ ಕಲೆಯೂ ಇತ್ತು ಎಂದು ನೆನಪಿಸಿಕೊಳ್ಳುತ್ತಾರೆ, ತಮ್ಮ ಮೃತ ತಂಗಿಯ ಫೋಟೋವನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ಇಡೀ ಕುಟುಂಬ ನೊಂದಿದೆ ಎನ್ನುತ್ತಾರೆ ವಿಜಯ್.

ಸುಜಾತಾ ಭಟ್ ಹೇಳುವ ನಾಪತ್ತೆ ಪ್ರಕರಣದ ಘಟನೆ ಒಂದಕ್ಕೊAದು ತಾಳೆಯೇ ಆಗುವುದಿಲ್ಲ. ಮೇಲ್ನೋಟಕ್ಕೆ ಈ ಘಟನೆ ಕಾಲ್ಪನಿಕ ಎಂದು ತೋರುತ್ತಿದೆ. ಅನನ್ಯ ಅವರು ೧೨ನೇ ತರಗತಿಯವರೆಗೆ ವ್ಯಾಸಂಗ ಮಾಡಿದ ಶಾಲೆ ಅಥವಾ ಕಾಲೇಜಿನ ಮಾಹಿತಿ ನೀಡಿಲ್ಲ. ಮಣಿಪಾಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಸಿಗಬೇಕಾದರೆ ಸಿಇಟಿ ಮೂಲಕ ಸಿಗಬೇಕು ಆದರೆ ಇವರ ಬಳಿ ದಾಖಲೆಯೇ ಇಲ್ಲ, ತಾನು ಕೋಮಾದಲ್ಲಿರುವಾಗ ಮನೆ ಬೀಗ ಒಡೆದು ಎಲ್ಲವನ್ನೂ ದೋಚಿಕೊಂಡು ಹೋದರು ಎನ್ನುತ್ತಾರೆ.

೨೦೦೩ರಲ್ಲಿ ಅನನ್ಯ ಅವರ ಸ್ನೇಹಿತೆ ರಶ್ಮಿ ಎನ್ನುವವರು ಧರ್ಮಸ್ಥಳದಲ್ಲಿ ಅನನ್ಯ ನಾಪತ್ತೆ ಕುರಿತು ಕೋಲ್ಕತ್ತಾ ಸಿಬಿಐ ಕಛೇರಿಯನ್ನು ಸಂಪರ್ಕಿಸಿ ತನಗೆ ಮಾಹಿತಿ ನೀಡಿದರು ಎನ್ನುತ್ತಾರೆ. ೨೦೦೩ರಲ್ಲಿ ಮೊಬೈಲ್ ಬಂದಿತ್ತಾದರೂ ಜನಸಾಮಾನ್ಯರ ಬಳಿ ಮೊಬೈಲ್ ಬಳಕೆ ಇರಲಿಲ್ಲ ಮತ್ತು ಇದ್ದುದೆಲ್ಲವೂ ಬೇಸಿಕ್ ಸೆಟ್‌ಗಳು. ಆಗ ಇಂಟರ್ ನೆಟ್ ಬಳಕೆ ಕೂಡ ವ್ಯಾಪಕ ಆಗಿರಲಿಲ್ಲ. ರಶ್ಮಿಗೆ ಅದೇ ದಿನವೇ ಸಿಬಿಐ ಕಚೇರಿಯ ನಂಬರ್ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಹೋಗಲಿ ಇಷ್ಟೆಲ್ಲ ದೊಡ್ಡ ಪ್ರಮಾಣದಲ್ಲಿ ಪ್ರಚಾರ, ಪ್ರತಿಭಟನೆ ನಡೆಯುವಾಗಲೂ ಅನನ್ಯ ಭಟ್ ಸ್ನೇಹಿತೆ ರಶ್ಮಿ ಯಾಕೆ ಇದುವರೆಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿಲ್ಲ? ಎಂಬ ಪ್ರಶ್ನೆ ಮೂಡುತ್ತದೆ.

ಸಿಬಿಐನಲ್ಲಿ ಸ್ಟೆನೋ ಗಳಿಗೆ ಡಿಕ್ಟೇಷನ್ ನೀಡುವವರು ಐಪಿಎಸ್ ಅಧಿಕಾರಿ ಆಗಿರುತ್ತಾರೆ. ಸುಜಾತಾ ಭಟ್ ಅವರು ೯ ವರ್ಷ ಸಿಬಿಐನಲ್ಲಿ ಸ್ಟೆನೋ ಆಗಿ ಕೆಲಸ ಮಾಡಿದ್ದೆ ಎನ್ನುತ್ತಾಳಾದರೂ ಅವರ ಮೇಲಧಿಕಾರಿಯ ಹೆಸರು ಗೊತ್ತಿಲ್ಲ. ಮರೆತು ಹೋಗಿದೆ ಎನ್ನುತ್ತಾರೆ. ಕೋಲ್ಕತ್ತಾದಲ್ಲಿ ವರ್ಷಗಳ ಕಾಲ ಇದ್ದವರಿಗೆ ಕನಿಷ್ಟ ಪಕ್ಷ ಊಟ ಆಯಿತಾ, ಟೀ ಕುಡಿಯುತ್ತೀರ ಎಂಬುದಕ್ಕೆ ಬೆಂಗಾಲಿ ಪದವಾದರೂ ಗೊತ್ತಿರಬೇಕು ಆದರೆ ಇವರಿಗೆ ಒಂದೇ ಬೆಂಗಾಲಿ ಪದ ಗೊತ್ತಿಲ್ಲ. ಕೋಮಾದಲ್ಲಿದ್ದುದರಿಂದ ಮರೆತು ಹೋಯ್ತು ಎನ್ನುತಿದ್ದಾರೆ.

ಧರ್ಮಸ್ಥಳದಲ್ಲಿ ಇವರನ್ನು ಕುರ್ಚಿಗೆ ಕಟ್ಟಿ ಥಳಿಸಿ ಗಾಯಗೊಂಡಾಗ ಆಸ್ಪತ್ರೆಗೆ ಸೇರಿಸಲಾಗಿತ್ತು ಎನ್ನುವ ಈಕೆ ಸೇರಿಸಿದವರು ಯಾರು ಎಂದರೆ ಗೊತ್ತಿಲ್ಲ ಎನ್ನುತ್ತಾರೆ. ಧರ್ಮಸ್ಥಳದಿಂದ ೭೦ ಕಿ.ಮೀ ದೂರದ ಮಂಗಳೂರಿನಲ್ಲಿ ಉತ್ತಮ ಆಸ್ಪತ್ರೆಗಳಿವೆ. ಅಲ್ಲಿಗೆ ಸೇರಿಸುವುದು ಬಿಟ್ಟು ದುಬಾರಿ ವೆಚ್ಚದ ಆ್ಯಂಬುಲೆನ್ಸ್ ನಲ್ಲಿ ೩೦೦ ಕಿಮಿ ದೂರದ ಬೆಂಗಳೂರಿನ ಅಗಡಿ ಆಸ್ಪತ್ರೆಗೆ ಕೊಂಡೊಯ್ಯುವ ಅವಶ್ಯಕತೆ ಏನಿತ್ತು? ಎನ್ನುವುದಕ್ಕೆ ಆಕೆಯಲ್ಲಿ ಉತ್ತರವಿಲ್ಲ.

ಅವರ ಹೇಳಿಕೆಯ ಕುರಿತು ಈ ವರದಿಗಾರ ವಿಲ್ಸನ್‌ಗಾರ್ಡನ್‌ನಲ್ಲಿರುವ ಅಗಡಿ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ೨೦೨೩ ರಲ್ಲಿ ಸುಜಾತಾ ಭಟ್ ಹೆಸರಿನ ಯಾವುದೇ ರೋಗಿ ಐಸಿಯುನಲ್ಲಿ ಮೂರು ತಿಂಗಳ ಕಾಲ ಚಿಕಿತ್ಸೆ ಪಡೆದ ದಾಖಲೆ ಇಲ್ಲ ಎಂದು ಹೇಳಿದ್ದಾರೆ.

ಕೋಲ್ಕತ್ತಾದ ಸಿಬಿಐ ಕಚೇರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ ಸುಜಾತಾ ಭಟ್ ಎನ್ನುವವರು ಯಾರೂ ಅಲ್ಲಿ ಸ್ಟೆನೋ ಆಗಿರಲೇ ಇಲ್ಲ, ಇವರು ಹೇಳುವ ಅವಧಿಯಲ್ಲಿ ದೇಬಶಿಶ್ ಮತ್ತು ಮೌಮಿತಾ ಮುಖರ್ಜಿ ಎನ್ನುವವರು ಸ್ಟೆನೋಗಳಾಗಿ ಕೆಲಸ ನಿರ್ವಹಿಸಿದ್ದರು ಎಂದು ತಿಳಿಸಿದ್ದಾರೆ. ತಾನು ೯ ವರ್ಷ ಕೆಲಸ ಮಾಡಿ ತನಗೆ ಬರಬೇಕಾದ ಬಾಕಿ ಹಣ ಪಿಎಫ್ ಇತ್ಯಾದಿ ಎಲ್ಲವನ್ನೂ ಬಿಟ್ಟು ಬಂದೆ ಪುನಃ ಕೋಲ್ಕತ್ತಾಗೆ ಹೋಗಲಿಲ್ಲ ಎಂದು ಸುಜಾತಾ ಹೇಳುತ್ತಾರೆ. ಇವರ ಹೇಳಿಕೆಯು ಸಾಕಷ್ಟು ಸಂಶಯವನ್ನು ಹುಟ್ಟು ಹಾಕಿದ್ದು ಮೇಲ್ನೋಟಕ್ಕೆ ಇದು ಕಟ್ಟು ಕಥೆ ಎಂಬAತೆ ತೋರುತ್ತಿದೆ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

ಸುಳ್ಳು ಪ್ರಕರಣ ದಾಖಲಿಸಿದ್ದರೆ ಎಸ್‌ಐಟಿ ದೂರುದಾರರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.