ಮಡಿಕೇರಿ, ಆ. ೨೦ : ಅಸ್ಸಾಂ ರಾಜ್ಯದಿಂದ ಕೊಡಗಿಗೆ ಬಂದು ನೆಲೆಸಿರುವ ವಲಸಿಗರ ಪೈಕಿ ಹಲವರು ಬ್ಯಾಂಕ್‌ಗಳಲ್ಲಿ ನಕಲಿ ಆಧಾರ್ ಕಾರ್ಡ್ ನೀಡಿ ಖಾತೆ ತೆರೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಈ ಹಿನ್ನೆಲೆ ಪೊಲೀಸರು ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.

ಜಿಲ್ಲಾ ಕೇಂದ್ರ ಮಡಿಕೇರಿಯ ಕೆಲವು ಬ್ಯಾಂಕ್‌ಗಳಲ್ಲಿ ಅಸ್ಸಾಂ ರಾಜ್ಯದ ಹಲವು ಮಂದಿ ಚಿಕ್ಕಮಗಳೂರು ಸೇರಿದಂತೆ ಕರ್ನಾಟಕ ರಾಜ್ಯ ಹಾಗೂ ಕೊಡಗು ಜಿಲ್ಲೆಯೊಳಗಿನ ವಿವಿಧ ವಿಳಾಸಗಳನ್ನು ಒಳಗೊಂಡ ನಕಲಿ ಆಧಾರ್ ಕಾರ್ಡ್ಗಳನ್ನು ನೀಡಿ ಖಾತೆ ತೆರೆದಿದ್ದಾರೆ. ಈ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಮಡಿಕೇರಿ ನಗರ ಪೊಲೀಸರು ವಿವಿಧ ಬ್ಯಾಂಕ್‌ಗಳಿಗೆ ಪತ್ರ ಬರೆದು ನಕಲಿ ಆಧಾರ್ ಕಾರ್ಡ್ ನೀಡಿ ಖಾತೆ ತೆರೆದಿರುವವರ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ವೇಳೆ ಕೆಲವು ಖಾತೆಗಳಲ್ಲಿ ದೊಡ್ಡಮೊತ್ತದ ಹಣವಿರುವುದು ಕಂಡುಬAದಿದೆ ಎನ್ನಲಾಗಿದ್ದು, ನಕಲಿ ಆಧಾರ್ ಕಾರ್ಡ್ ನೀಡಿ ಖಾತೆ ತೆರೆದವರ ದಾಖಲೆಗಳು ಸಿಕ್ಕ ಬಳಿಕ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪೊಲೀಸರು ಚಿಂತಿಸಿರುವ ಬಗ್ಗೆ ಮಾಹಿತಿ ದೊರೆತಿದೆ. ನಕಲಿ ಆಧಾರ್ ಕಾರ್ಡ್ ಬಳಸಿ ಖಾತೆ ತೆರೆದಿರುವ ಕೆಲ ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿ ಬ್ಯಾಂಕ್‌ಗೆ ಪತ್ರ ಬರೆದಿರುವ ಪೊಲೀಸರು ಅವರುಗಳ ಬ್ಯಾಂಕ್ ಖಾತೆ ಹಾಗೂ ಕೆವೈಸಿ ವಿವರವನ್ನು ನೀಡುವಂತೆ ಬ್ಯಾಂಕ್ ವ್ಯವಸ್ಥಾಪಕರಲ್ಲಿ ಮನವಿ ಮಾಡಿದ್ದಾರೆ. ಬ್ಯಾಂಕ್‌ನಿAದ ವಿವರ ಸಿಕ್ಕ ಬಳಿಕ ಮುಂದಿನ ಹೆಜ್ಜೆ ಇಡಲು ನಿರ್ಧರಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಕೊಡಗು ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ಅಸ್ಸಾಂ ಕಾರ್ಮಿಕರಿಂದ ಜಿಲ್ಲೆಯ ಹಿತಕ್ಕೆ ಭವಿಷ್ಯದಲ್ಲಿ ಧಕ್ಕೆಯಾಗಲಿದೆ ಎಂದು ಕೇಳಿಬರುತ್ತಿರುವ ಆರೋಪಕ್ಕೆ ಇದೀಗ ನಕಲಿ ಆಧಾರ್ ಕಾರ್ಡ್ ಬಳಸಿ ಬ್ಯಾಂಕ್ ಖಾತೆ ತೆರೆಯಲು ಮುಂದಾಗಿರುವ ಬೆಳವಣಿಗೆ ಪುಷ್ಠಿ ನೀಡುವಂತಿದ್ದು ಈ ಬಗ್ಗೆ ಸಂಬAಧಿಸಿದ ಇಲಾಖೆಗಳು ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಅಲ್ಲದೆ ನಕಲಿ ಆಧಾರ್ ಕಾರ್ಡ್ ಮಾಡಿಕೊಡುವವರನ್ನು ಕೂಡ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ - ಟಿ.ಜಿ. ಸತೀ