ಸೋಮವಾರಪೇಟೆ, ಆ. ೨೧: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಕೊತ್ನಳ್ಳಿ ಗ್ರಾಮದ ತಡ್ಡಿಕೊಪ್ಪ ನಿವಾಸಿ, ರೈತ ಮಹಿಳೆಯೋರ್ವರ ಮನೆ ನಿರ್ಮಾಣಕ್ಕೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಕೈಜೋಡಿಸಿದ್ದು, ಮನೆಯ ನವೀಕರಣ ಕಾರ್ಯಕ್ಕೆ ರೂ. ೧ ಲಕ್ಷಕ್ಕೂ ಅಧಿಕ ಹಣವನ್ನು ವ್ಯಯಿಸಿ ಗೃಹಪ್ರವೇಶ ಸಮಾರಂಭ ನಡೆಸಿತು.
ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ತಡ್ಡಿಕೊಪ್ಪ ಗ್ರಾಮದಲ್ಲಿ ಬಡ ರೈತ ಮಹಿಳೆ ರತಿ ಎಂಬವರು ನೆಲೆಸಿದ್ದು, ಇವರ ಈರ್ವರು ಮಕ್ಕಳು ಇತ್ತೀಚೆಗಷ್ಟೇ ವಿದ್ಯಾಭ್ಯಾಸ ಪೂರೈಸಿದ್ದಾರೆ. ಕುಗ್ರಾಮವಾಗಿರುವ ತಡ್ಡಿಕೊಪ್ಪಕ್ಕೆ ಸಮರ್ಪಕ ರಸ್ತೆ ಸೇರಿದಂತೆ ಇನ್ನಿತರ ಸೌಲಭ್ಯಗಳು ಈಗಲೂ ಮರೀಚಿಕೆಯಾಗಿದೆ. ಇಂತಹ ಸ್ಥಳದಲ್ಲಿ ಅಲ್ಪಸ್ವಲ್ಪ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ರತಿ ಅವರ ಮನೆಯು ಶಿಥಿಲಾವಸ್ಥೆಗೆ ತಲುಪಿತ್ತು. ಇದನ್ನು ಮನಗಂಡ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು, ರತಿ ಅವರ ಮನೆ ನಿರ್ಮಾಣ ಹಾಗೂ ನವೀಕರಣ ಕಾರ್ಯಕ್ಕೆ ಕೈ ಜೋಡಿಸಿದ್ದು, ಸಮಿತಿಯ ಪದಾಧಿಕಾರಿಗಳೇ ಸೇರಿ ರೂ. ೧ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹಿಸಿ ರೈತ ಮಹಿಳೆಯ ಮನೆ ನವೀಕರಣಕ್ಕೆ ನೆರವಾದರು.
ನವೀಕರಣಗೊಂಡ ಮನೆಗೆ ಶಾಸಕ ಡಾ. ಮಂತರ್ ಗೌಡ ಅವರನ್ನು ಆಹ್ವಾನಿಸಿ, ಟೇಪ್ ಕತ್ತರಿಸುವ ಮೂಲಕ ಗೃಹಪ್ರವೇಶವನ್ನೂ ನೆರವೇರಿಸಲಾಯಿತು. ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ಅವರ ನೇತೃತ್ವದಲ್ಲಿ ಮನೆಯ ನವೀಕರಣ ಕಾರ್ಯಗಳು ಪೂರ್ಣಗೊಂಡಿದ್ದು, ರೈತ ಮಹಿಳೆ ಸೇರಿದಂತೆ ಕುಟುಂಬದ ಸದಸ್ಯರು ಸಂಭ್ರಮದಲ್ಲಿದ್ದರು.
ಈ ಸಂದರ್ಭ ಮಾತನಾಡಿದ ಶಾಸಕ ಡಾ. ಮಂತರ್ ಗೌಡ ಅವರು, ತಡ್ಡಿಕೊಪ್ಪ ಗ್ರಾಮವು ಹಲವು ದಶಕಗಳಿಂದ ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು, ಈಗಲೂ ಇಂತಹ ಸ್ಥಳದಲ್ಲಿ ವಾಸ ಮಾಡುವುದು ಸವಾಲಿನ ಜೀವನ. ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಪ್ರಯತ್ನಿಸಲಾಗುವುದು. ಆದ್ಯತೆಯ ಮೇರೆ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ತಾಲೂಕು ಅಭಿವೃದ್ದಿ ಹೋರಾಟ ಅಧ್ಯಕ್ಷ ಅರುಣ್ ಕೊತ್ನಳ್ಳಿ ಮಾತನಾಡಿ, ಬಡ ರೈತ ಮಹಿಳೆಯ ಮನೆಗೆ ಈ ಹಿಂದೆ ಭೇಟಿ ನೀಡಿದ ಸಂದರ್ಭ ಮನೆಯು ಶಿಥಿಲಾವಸ್ಥೆಗೆ ತಲುಪಿದ್ದನ್ನು ಗಮನಿಸಿದ್ದೆವು. ಈ ಭಾಗದಲ್ಲಿ ವಾರ್ಷಿಕ ೩೦೦ ಇಂಚಿಗೂ ಅಧಿಕ ಮಳೆ ಸುರಿಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಕೃಷಿಯೂ ಕೈ ಹಿಡಿಯುವುದಿಲ್ಲ. ಸಂಕಷ್ಟದ ಜೀವನ ನಡೆಸುತ್ತಿರುವುದು, ಈರ್ವರು ಮಕ್ಕಳು ಈಗಷ್ಟೇ ವಿದ್ಯಾಭ್ಯಾಸ ಪೂರೈಸಿರುವುದನ್ನು ಮನಗಂಡು ಮನೆಯ ನಿರ್ಮಾಣ ಹಾಗೂ ನವೀಕರಣಕ್ಕೆ ಸಹಾಯ ನೀಡುವ ಬಗ್ಗೆ ಸದಸ್ಯರುಗಳು ತೀರ್ಮಾನಿಸಿ, ಕೈಲಾದ ಸಹಕಾರ ಒದಗಿಸಲಾಗಿದೆ ಎಂದರು.ಕುಗ್ರಾಮಗಳ ಅಭಿವೃದ್ಧಿಗೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕೊತ್ನಳ್ಳಿ, ತಡ್ಡಿಕೊಪ್ಪ ಸೇರಿದಂತೆ ಶಾಂತಳ್ಳಿ ಹೋಬಳಿಗೆ ವಿಶೇಷ ಆದ್ಯತೆ ನೀಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ತಾಲೂಕು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಪದಾಧಿಕಾರಿಗಳಾದ ಹೂವಯ್ಯ ಮಾಸ್ಟರ್, ಸುಲೈಮಾನ್, ಉದಯ, ತ್ರಿಶೂಲ್ ಹರಗ, ನಾಗಂಡ ಭವಿನ್, ಅಂಕುಶ್, ವಸಂತ್, ಮಂಜುನಾಥ್, ನ.ಲ. ವಿಜಯ, ಕೂಗೂರು ಸಂದೀಪ್, ಪ್ರದೀಪ್, ನಿತನ್ ಮಿಟ್ಟು ಸೇರಿದಂತೆ ಇತರರು ಇದ್ದರು.