ನಾಪೋಕ್ಲು, ಆ. ೨೧: ಇಲ್ಲಿನ ಹಿಂದೂ ಮಲಯಾಳಿ ಸಂಘದ ವತಿಯಿಂದ ಹಿಂದೂ ಬಾಂಧವರಿಗಾಗಿ ಸಮೀಪದ ಹಳೆ ತಾಲೂಕಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಈಶ್ವರ ಇಗ್ಗುತ್ತಪ್ಪ-ಬಿ ತಂಡ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಪುರುಷರಿಗಾಗಿ ಆಯೋಜಿಸಲಾಗಿರುವ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಮೊದಲ ಬಹುಮಾನ ರೂ. ೩೩,೩೩೩ ನಗದು ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಯಿತು. ದ್ವಿತೀಯ ಸ್ಥಾನವನ್ನು ಈಶ್ವರ ಇಗ್ಗುತ್ತಪ್ಪ-ಎ ತಂಡ ಗಳಿಸಿತು. ಈ ತಂಡ ದ್ವಿತೀಯ ಬಹುಮಾನ ರೂ. ೨೨,೨೨೨ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ತೃತೀಯ ಸ್ಥಾನ ಬೇಗೂರು ಮಹಾ ವಿಷ್ಣು ತಂಡದ ಪಾಲಾಯಿತು. ತೃತೀಯ ಸ್ಥಾನ ಪಡೆದ ತಂಡಕ್ಕೆ ನಗದು ೧೧,೧೧೧ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ಲಭಿಸಿತು.

ಮಹಿಳಾ ವಿಭಾಗದಲ್ಲಿ ಬಲಮುರಿಯ ಮಹದೇವ ಸ್ಪೋರ್ಟ್ಸ್ ಕ್ಲಬ್ ತಂಡ ಪ್ರಥಮ ಸ್ಥಾನ ಗಳಿಸಿತು. ದ್ವಿತೀಯ ಸ್ಥಾನ ನಾಪೋಕ್ಲು ಭಗವತಿ ತಂಡದ ಪಾಲಾಯಿತು. ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ರೂ. ೧೧,೧೧೧ ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ಎರಡನೇ ಸ್ಥಾನ ಪಡೆದ ತಂಡಕ್ಕೆ ೫,೫೫೫ ರೂ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಹಿಂದೂ ಮಲಯಾಳಿ ಸಂಘದ ವತಿಯಿಂದ ವಿತರಿಸಲಾಯಿತು.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ಸಿ. ನಾಣಯ್ಯ ಇಂದು ನಮ್ಮ ಸಮಾಜ ವಿವಿಧ ಕಾರಣಗಳಿಂದ ಒಡೆಯುತ್ತಿದೆ. ಸಮಾಜವನ್ನು ಒಗ್ಗೂಡಿಸುವ ವಿಶೇಷ ಪ್ರಯತ್ನವನ್ನು ಕ್ರೀಡೆಗಳನ್ನು ಆಯೋಜಿಸುವುದರ ಮೂಲಕ ಸಂಘ ಸಂಸ್ಥೆಗಳು ಮಾಡುತ್ತಿವೆ. ಹಗ್ಗಜಗ್ಗಾಟ ಸ್ಪರ್ಧೆಯನ್ನು ಆಯೋಜಿಸುವುದರ ಮೂಲಕ ಹಿಂದೂ ಮಲಯಾಳಿ ಸಂಘ ಸಮಾಜದ ಒಗ್ಗಟ್ಟಿಗೆ ಕಾರಣವಾಗಿದೆ ಎಂದರು. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಅವರು ಮಾತನಾಡಿ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರಾದ ಎ.ಎಸ್. ಪೊನ್ನಣ್ಣನವರು ಒಂದು ಕೋಟಿ ರೂಪಾಯಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾರಿ ಜಾಗ ಲಭ್ಯವಿಲ್ಲದ ಕಾರಣ ನಿವೇಶನಕ್ಕಾಗಿ ಜಾಗ ಖರೀದಿ ಮಾಡಬೇಕಾದ ಅವಶ್ಯಕತೆ ಇದೆ. ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕು. ಸಂಘದ ಶ್ರೇಯೋಭಿವೃದ್ಧಿಗೆ ಒಂದು ಲಕ್ಷ ರೂಪಾಯಿಗಳ ದೇಣಿಗೆ ನೀಡುವುದಾಗಿ ಘೋಷಿಸಿದರು.

ಹಿಂದೂ ಮಲಯಾಳಿ ಸಂಘ ಮಡಿಕೇರಿ ತಾಲೂಕಿನ ಅಧ್ಯಕ್ಷ ಧರ್ಮೇಂದ್ರ ಅವರು ಮಾತನಾಡಿ ಕ್ರೀಡೆ ಎನ್ನುವುದು ಕೇವಲ ಪ್ರಶಸ್ತಿಗೋಸ್ಕರ ಆಗಬಾರದು. ಗೆದ್ದವರು ಹಿಗ್ಗದೆ ಸೋತವರು ಕುಗ್ಗದೆ ಕ್ರೀಡಾ ಮನೋಭಾವನೆಯಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಯಿಂದ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬಹುದು ಕ್ರೀಡೆಯಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು. ಮಡಿಕೇರಿ ಹಿಂದು ಮಲಯಾಳಿ ಸಂಘದ ಗೌರವಾಧ್ಯಕ್ಷ ರಮೇಶ್, ಉಪಾಧ್ಯಕ್ಷ ಅಭಿಲಾಷ್, ಕಾರ್ಯದರ್ಶಿ ರಮೇಂದ್ರ, ಖಜಾಂಚಿ ಮಣಿ, ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಪ್ರದೀಪ್, ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಆಲಿ, ಮಡಿಕೇರಿ ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹರೀಶ್ ಪೂವಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ಬೇಬಾ ಮಾತನಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಪೋಕ್ಲು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಅನಿಲ್ ಕೆ.ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ನಾಪೋಕ್ಲು ಹಿಂದೂ ಮಲಯಾಳಿ ಸಂಘದ ಮಹಿಳಾ ಅಧ್ಯಕ್ಷೆ ಸುಮಿತ್ರ ವಿನೋದ್, ಹಿಂದೂ ಮಲಯಾಳಿ ಸಂಘದ ಖಜಾಂಚಿ ವಿಶ್ವನಾಥ್, ನಾಪೋಕ್ಲು ಶಕ್ತಿ ಕೇಂದ್ರದ ಅಧ್ಯಕ್ಷ ಅಂಬಿ ಕಾರಿಯಪ್ಪ, ಕಾಫಿ ಬೆಳೆಗಾರ ಎ.ಎಂ.ರತ್ನ ಪೆಮ್ಮಯ್ಯ, ಹಿಂದೂ ಮಲಯಾಳಿ ಸಂಘದ ಸಲಹೆಗಾರರಾದ ವಿನಿಲ್, ರಘು ಅಜ್ಜಿಮುಟ್ಟ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ನಾಪೋಕ್ಲು ಹಿಂದೂ ಮಲಯಾಳಿ ಸಂಘದ ಮಹಿಳಾ ಘಟಕದ ವತಿಯಿಂದ ನಡೆದ ತಿರುವಾದಿರ ನೃತ್ಯ ಗಮನ ಸೆಳೆಯಿತು.

ರವಿ ಓಂಕಾರ್ ಪ್ರಾರ್ಥನೆಯೊಂದಿಗೆ ಪ್ರಾರಂಭಗೊAಡ ಕಾರ್ಯಕ್ರಮವನ್ನು ಶೈಲಾ ಸ್ವಾಗತಿಸಿ, ಅನಿಲ್ ಕೆ.ಕೆ. ವಂದಿಸಿದರು.