ಸೋಮವಾರಪೇಟೆ, ಆ.೨೧: ಕೊಡಗಿನ ರೈತರ ನಿದ್ದೆಗೆಡಿಸಿರುವ ಸಿ ಮತ್ತು ಡಿ ಜಾಗ ಸಮಸ್ಯೆ, ಸೆಕ್ಷನ್-೪ ಹಾಗೂ ಸೆಕ್ಷನ್-೫ಗೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ಈಗಾಗಲೇ ಹೋರಾಟಗಳು ಆರಂಭವಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರ ನಿಯೋಗ ಈರ್ವರು ಶಾಸಕರುಗಳೊಂದಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಶಾಸಕದ್ವಯರಾದ ಎ.ಎಸ್. ಪೊನ್ನಣ್ಣ ಮತ್ತು ಡಾ.ಮಂತರ್ ಗೌಡ ರವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಗೃಹ ಕಚೇರಿ ಕಾವೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಜಿಲ್ಲಾ ಕಾಂಗ್ರೆಸ್ ಮುಖಂಡರು, ಪ್ರಸ್ತುತ ಕೊಡಗಿನ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಜಿಲ್ಲಾ ಕಾಂಗ್ರೆಸ್ ನಿಯೋಗದ ಅಹವಾಲುಗಳನ್ನು ಆಲಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಒಂದು ವಾರದೊಳಗೆ ಅಧ್ಯಯನ ಸಮಿತಿ ರಚನೆ ಮಾಡಲಾಗುವುದು. ಈ ಸಮಿತಿಯು ಶೀಘ್ರದಲ್ಲೇ ಜಿಲ್ಲೆಗೆ ಭೇಟಿ ನೀಡಿ ರೈತರು ಹಾಗೂ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ನೀಡಲಿದೆ. ರೈತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದು ನಿಯೋಗಕ್ಕೆ ಅಭಯ ನೀಡಿದರು.

ಈ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಉಪಾಧ್ಯಕ್ಷ ಕೆ.ಎಂ. ಲೋಕೇಶ್, ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಸದಸ್ಯೆ ಕೆ.ಪಿ. ಚಂದ್ರಕಲಾ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಸತೀಶ್, ಕಾಂಗ್ರೆಸ್ ಮುಖಂಡರಾದ ನಂದಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಲ್. ಜನಾರ್ಧನ್, ಡಿಸಿಸಿ ಸದಸ್ಯ ಲಾರೆನ್ಸ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಖಜಾಂಜಿ ಚೇತನ್, ಸೋಮವಾರಪೇಟೆ ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಡಿ.ಯು., ಕಾಂಗ್ರೆಸ್ ಮುಖಂಡರಾದ ಹಣಕೋಡು ಸುರೇಶ್, ಜೆ.ಆರ್. ಪಾಲಾಕ್ಷ, ವೀರೇಂದ್ರ, ಸೇರಿದಂತೆ ಇತರರು ಉಪಸ್ಥಿತರಿದ್ದರು.