ಕೊಡ್ಲಿಪೇಟೆ,ಆ.೨೨: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡಿದವರÀ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕ್ಷೇತ್ರದ ಗೌರವಕ್ಕೆ ಚ್ಯುತಿ ತರುವವರಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಕೊಡ್ಲಿಪೇಟೆ ಪಟ್ಟಣದಲ್ಲಿ ಭಕ್ತರು, ಸ್ಥಳೀಯ ಸ್ವಾಮೀಜಿಗಳ ನೇತೃತ್ವದಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಕೊಡ್ಲಿಪೇಟೆಯ ಕಡೇಪೇಟೆ ಗಣಪತಿ ದೇವಾಲಯದಿಂದ ಕೊಡ್ಲಿಪೇಟೆ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಯಟ್ಯೂಬರ್ ಎಂ.ಡಿ. ಸಮೀರ್, ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ತಮಿಳುನಾಡಿನ ಸಂಸದ ಶಶಿಕಾಂತ್ ಸೆಂದಿಲ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಧರ್ಮಸ್ಥಳ ಮಂಜುನಾಥೇಶ್ವರ ಭಕ್ತಾಭಿಮಾನಿಗಳ ಬಳಗದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ, ನೂರಾರು ಮಂದಿ ಭಾಗಿಯಾಗಿದ್ದರು. ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಸಭೆ ಸೇರಿದ ಪ್ರತಿಭಟನಾಕಾರರು ಕ್ಷೇತ್ರದ ತೇಜೋವಧೆಯ ವಿರುದ್ಧ ಆಕ್ರೋಶ ಹೊರಹಾಕಿದರು. ಶ್ರೀ ಕ್ಷೇತ್ರದ ವಿರುದ್ಧ ಕಪೋಲಕಲ್ಪಿತ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸುತ್ತಿರುವ ಸಮಾಜಘಾತುಕ ಶಕ್ತಿಗಳನ್ನು ಮೆಟ್ಟಿನಿಲ್ಲಬೇಕೆಂದು ಪ್ರಮುಖರು ಕರೆ ನೀಡಿದರು.

ಈ ಸಂದರ್ಭ ಮಾತನಾಡಿದ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿಗಳು, ಧರ್ಮಸ್ಥಳ ಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತೆರಳುತ್ತಾರೆ. ಹಿಂದೂಗಳ ಧಾರ್ಮಿಕ ಕೇಂದ್ರವಾಗಿ ಧರ್ಮಸ್ಥಳ ಹೆಸರು ಪಡೆದಿದೆ. ಶ್ರದ್ಧೆ, ನಂಬಿಕೆಗೆ ಪಾತ್ರವಾಗಿದೆ. ಇದೇ ಧರ್ಮಸ್ಥಳದಿಂದ ರಾಜ್ಯಾದ್ಯಂತ ಸಾವಿರಾರು ದೇವಾಲಯಗಳ ಜೀರ್ಣೋದ್ದಾರ, ನೂತನ ದೇವಾಲಯಗಳ ನಿರ್ಮಾಣಕ್ಕೆ ಧನ ಸಹಾಯ ಲಭಿಸುತ್ತಿದೆ. ಇಂತಹ ಕ್ಷೇತ್ರದ ವಿರುದ್ಧ ಕೆಲವರು ಕಪೋಲಕಲ್ಪಿತ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕ್ಷೇತ್ರದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಹಲವಷ್ಟು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದೂ ಸಂಸ್ಕೃತಿಯ ಉಳಿವು ಹಾಗೂ ಧಾರ್ಮಿಕ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇದನ್ನು ಸಹಿಸದ ಪಟ್ಟಭದ್ರ ಹಿತಾಸಕ್ತಿಗಳು ವೃಥಾ ಆರೋಪದ ಮೂಲಕ ಕ್ಷೇತ್ರ ಹಾಗೂ ಹೆಗ್ಗಡೆಯವರ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ನಡೆಸುತ್ತಿವೆ. ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ಧಕ್ಕೆ ತರುವ ಇಂತಹ ಪ್ರಯತ್ನಕ್ಕೆ ಕಡಿವಾಣ ಹಾಕಲೇಬೇಕೆಂದು ಅಭಿಮತ ವ್ಯಕ್ತಪಡಿಸಿದರು.

ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಹಿಂದೂಗಳು ಜೇನುಗೂಡಿನಂತೆ ಒಗ್ಗಟ್ಟಾಗುತ್ತಿದ್ದಾರೆ. ಈ ಗೂಡಿಗೆ ಕಲ್ಲು ಹೊಡೆಯುವ ಕೆಲಸಕ್ಕೆ ಯಾರೂ ಕೈ ಹಾಕಬಾರದು. ತಪ್ಪಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಧರ್ಮಸ್ಥಳವು ಇಡೀ ಹಿಂದೂ ಸಮಾಜದ ಶ್ರದ್ಧಾಕೇಂದ್ರವಾಗಿದೆ. ಇಂತಹ ಕ್ಷೇತ್ರದ ವಿರುದ್ಧ ಆಧಾರವಿಲ್ಲದೆ ಆರೋಪ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಪಟ್ಟಭದ್ರ ಹಿತಾಸಕ್ತಿಗಳಿಂದ ಆಗುತ್ತಿದೆ. ಈ ಬಗ್ಗೆ ಸಮಾಜ ಎಚ್ಚರಿಕೆ ವಹಿಸಬೇಕೆಂದರು.

ಪ್ರತಿಭಟನೆಯಲ್ಲಿ ಧರ್ಮಸ್ಥಳ ಭಕ್ತಾಭಿಮಾನ ಬಳಗದ ಭಗವಾನ್, ಮೋಕ್ಷಿಕ್‌ರಾಜ್, ಹರೀಶ್, ದಿನೇಶ್ ಬ್ಯಾಡಗೊಟ್ಟ, ದಯಾನಂದ್, ಅನೂಜ್, ಆದರ್ಶ್, ಅಶ್ವಥ್, ಭಾನುಮತಿ, ಮಮತಾ ಸತೀಶ್, ನಂದೀಶ್, ಸಿದ್ದೇಶ್, ಕೆಂಚೇಶ್ವರ್ ಸೇರಿದಂತೆ ಇತರರು ಭಾಗವಹಿಸಿದ್ದರು. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.