ಮೈಸೂರು: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ೪,೧೦೦ ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಮೈಸೂರು-ಕುಶಾಲನಗರ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ೧೪೦ ಎಕರೆ ಕಾಡು ಬಳಸಲು ಕೇಂದ್ರ ಅರಣ್ಯ ಇಲಾಖೆಯ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಆರ್ಇಸಿ) ಷರತ್ತುಬದ್ಧ ಅನುಮತಿ ನೀಡಿದೆ. ಕೇಂದ್ರ ಸರ್ಕಾರದ ಅರಣ್ಯ ಸಚಿವಾಲಯದ (ಒiಟಿisಣಡಿಥಿ oಜಿ ಇಟಿviಡಿoಟಿmeಟಿಣ ಚಿಟಿಜ ಈoಡಿesಣ) ಅಧೀನದಲ್ಲಿ ಬರುವ ಈ ಸಮಿತಿ ಮೂರು ದಿನದ ಹಿಂದೆ ನಿಗದಿತ ಶುಲ್ಕ ಪಾವತಿಸಿ ಹೆದ್ದಾರಿ ನಿರ್ಮಾಣ ಮಾಡಲು ಷರತ್ತಿನ ಅನುಮತಿ ನೀಡಿದೆ ಎಂದು ಹುಣಸೂರು ಪ್ರಾದೇಶಿಕ ವಿಭಾಗದ ಡಿಸಿಎಫ್ ಫಜಲುದ್ದೀನ್ ಶುಕ್ರವಾರ ತಿಳಿಸಿದರು.
ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಗಳಲ್ಲಿ ಮೈಸೂರು ವನ್ಯ ಜೀವಿ ವಿಭಾಗ , ನಾಗರಹೊಳೆ ಹುಲಿ ಅಭಯಾರಣ್ಯ ಹಾಗೂ ಹುಣಸೂರು ಅರಣ್ಯ ವಿಭಾಗದ ೧೪೧ ಎಕರೆ ಕಾಡನ್ನು ಹೆದ್ದಾರಿ ವಿಸ್ತರಣೆಗೆ ಬಳಸಿಕೊಳ್ಳಲಾಗುತ್ತದೆ. ಯೋಜನೆಗೆ ಕಾಡು ಬಳಕೆಗಾಗಿ ಹೆದ್ದಾರಿ ಪ್ರಾಧಿಕಾರವು ೨೦೨೪ರ ಜುಲೈನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಹುಣಸೂರು ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿ ಫಜಲುದ್ದೀನ್ ಸ್ಥಳ ಪರಿಶೀಲನೆ ನಡೆಸಿ, ವರದಿ ಸಲ್ಲಿಸಿದ್ದರು. ಹೆದ್ದಾರಿ ನಿರ್ಮಾಣಕ್ಕಾಗಿ ಮೂರೂ ಅರಣ್ಯ ವಿಭಾಗಗಳಲ್ಲಿ ೫೭೧ ಮರಗಳನ್ನು ಕಡಿಯಬೇಕಾಗುತ್ತದೆ. ಈ ಅರಣ್ಯವು ರಾಷ್ಟ್ರೀಯ ಉದ್ಯಾನವನ ಅಥವಾ ವನ್ಯಜೀವಿಧಾಮದ ಭಾಗವಲ್ಲ ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದ ಡಿಸಿಎಫ್ ಅವರು ನಾಗರಹೊಳೆ ಹುಲಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಈ ಯೋಜನೆಗಾಗಿ ೪೦ ಎಕರೆ ಅರಣ್ಯ ಬಳಸಿಕೊಳ್ಳಲಾಗುತಿದ್ದು ಈ ಪ್ರದೇಶವು ಕಾವೇರಿ ಅಧಿಸೂಚಿತ ಅರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಹೆದ್ದಾರಿ ನಿಗಮವು ಅರಣ್ಯ ಇಲಾಖೆಗೆ ಸುಮಾರು ೨೦ ಕೋಟಿ ರೂಪಾಯಿಗಳನ್ನು ಶುಲ್ಕದ ರೂಪದಲ್ಲಿ ಪಾವತಿಸಬೇಕಾಗುತ್ತದೆ ಎಂದೂ ಅವರು ತಿಳಿಸಿದರು. ಇದರಲ್ಲಿ ಪುನರ್ ಸಸಿ ನೆಡುವಿಕೆ ಅರಣ್ಯ ಸಂರಕ್ಷಣಾ ವೆಚ್ಚವೂ ಸೇರಿದೆ.
ಆದರೆ ಈ ೪೦ ಎಕರೆ ಅರಣ್ಯವು ಅಭಯಾರಣ್ಯದ ಮೀಸಲು ಪ್ರದೇಶದ ಕಾವೇರಿ ಭಾಗದಲ್ಲಿ ಬರುತ್ತದೆಯೇ ಇಲ್ಲವೇ ಎಂಬ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು. ಅಭಯಾರಣ್ಯದ ಮೀಸಲು ಪ್ರದೇಶದಲ್ಲಿ ಬಂದರೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿAದ ಅನುಮೋದನೆ ಪಡೆಯಬೇಕು ಎಂದು ಉನ್ನತಾಧಿಕಾರ ಸಮಿತಿ ಷರತ್ತು ವಿಧಿಸಿದೆ. ಕಾಡು ಬಳಕೆಗೆ ಅನುಮೋದನೆ ಕೋರಿರುವ ಪ್ರದೇಶವು ರಂಗನತಿಟ್ಟು ಪಕ್ಷಿಧಾಮದ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿದ್ದು, ರಾಷ್ಟ್ರೀಯ ವನ್ಯಜೀವಿಧಾಮದಿಂದ ಅಗತ್ಯ ಅನುಮೋದನೆ ಪಡೆಯಬೇಕು ಎಂದು ಸಮಿತಿ ಸೂಚಿಸಿದೆ.
ಪ್ರಸ್ತುತ, ಶ್ರೀರಂಗಪಟ್ಟಣದ ಅಗ್ರಹಾರದಿಂದ ಮೈಸೂರು ತಾಲೂಕಿನ ಯಲಚನಹಳ್ಳಿಯವರೆಗಿನ ೧೯ ಕಿ.ಮೀ. ಮತ್ತು ಹುಣಸೂರು ತಾಲೂಕಿನ ಬೆಳ್ತೂರಿನಿಂದ ಪಿರಿಯಾಪಟ್ಟಣ ತಾಲೂಕಿನ ಹರವೆ ಮಲ್ಲರಾಜಪಟ್ಟಣದವರೆಗಿನ ೨೪.೧೦ ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಸ್ಥಳೀಯ ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಪ್ಯಾಕೇಜ್ ೩ ಅನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮೋದಿಸಿದ ನಂತರ ಈ ಬೆಳವಣಿಗೆಗಳು ನಡೆದಿವೆ.
ಬೆಂಗಳೂರು-ಮೈಸೂರು-ಮಡಿಕೇರಿ ಮಾರ್ಗದಲ್ಲಿ ಹೆಚ್ಚುತ್ತಿರುವ ವಾಹನಗಳ ದಟ್ಟಣೆಗೆ ಅನುಗುಣವಾಗಿ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಹೊಸ ಹೆದ್ದಾರಿಯು ಬೆಂಗಳೂರು ಮತ್ತು ಕುಶಾಲನಗರ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ, ಪ್ರಸ್ತುತ ಕುಶಾಲನಗರ ಮತ್ತು ಬೆಂಗಳೂರಿನ ಪ್ರಯಾಣದ ಅವಧಿ ಬಸ್ಸಿನಲ್ಲಿ ಹೋದರೆ ೫.೩೦ ಘಂಟೆಗಳಾಗಿದ್ದು ಈ ಉದ್ದೇಶಿತ ಹೆದ್ದಾರಿ ಯೋಜನೆ ನಿರ್ಮಾಣದ ನಂತರ ಪ್ರಯಾಣದ ಅವಧಿ ೩.೩೦ ಘಂಟೆಗೆ ಇಳಿಯಲಿದ್ದು ಇದರಿಂದ ಅಮೂಲ್ಯ ಸಮಯ ಉಳಿತಾಯವಾಗಲಿದೆಯಲ್ಲದೆ ರಾಜಧಾನಿ ಕೊಡಗಿನ ಜನತೆಗೆ ಮತ್ತಷ್ಟು ಹತ್ತಿರವಾಗಲಿದ್ದು ವಾಣಿಜ್ಯ -ವಹಿವಾಟು ಮತ್ತಷ್ಟು ಹೆಚ್ಚಲಿದೆ. ಈ ಹೆದ್ದಾರಿಯು ಮೈಸೂರು ನಗರವನ್ನು ಸಂಪರ್ಕಿಸದೇ ಗುಡ್ಡೆಹೊಸೂರಿನಿಂದ ನೇರವಾಗಿ ಶ್ರೀರಂಗಪಟ್ಟಣವನ್ನು ಸಂಪರ್ಕಿಸುವುದರಿAದ ಮತ್ತಷ್ಟು ಸಮಯ ಉಳಿಯಲಿದ್ದು ಹಾಲಿ ಹೆದ್ದಾರಿಯ ವಾಹನ ದಟ್ಟಣೆ ಗಣನೀಯವಾಗಿ ಕಡಿಮೆ ಆಗಲಿದೆ. ಅಲ್ಲದೆ ಇದು ಬೆಂಗಳೂರು -ಮಂಗಳೂರು ಪ್ರಯಾಣಿಕರಿಗೂ ಹೆಚ್ಚಿನ ಅನುಕೂಲ ಆಗಲಿದ್ದು ಎರಡು ನಗರಗಳ ಸಂಪರ್ಕಕ್ಕೆ ಅತ್ಯಂತ ಸಮೀಪದ ಹಾದಿ ಆಗಲಿದೆ. ಕಳೆದ ಮಾರ್ಚ್ ೨೦೨೩ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಈ ಉದ್ದೇಶಿತ ಯೋಜನೆಗೆ ಗಣನೀಯ ಶ್ರಮ ವಹಿಸಿದ್ದರು.