ಕಣಿವೆ, ಆ. ೨೩: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಡೆಬೆಟ್ಟ ಗಿರಿಜನ ಹಾಡಿಯಲ್ಲಿ ಕಾಡಾನೆ ಹಾವಳಿ ಎಲ್ಲೆ ಮೀರಿದ್ದು, ಕೃಷಿಕರು ಕೈಗೊಂಡ ಕೃಷಿ ಫಸಲು ಕಾಡಾನೆಗಳ ಪಾಲಾಗುತ್ತಿದೆ.

ತಮ್ಮು ಎಂಬವರ ಎರಡು ಎಕರೆ ಹೊಲದಲ್ಲಿ ಗಣೇಶ ಎಂಬವರು ಬೆಳೆದಿದ್ದ ಸಿಹಿ ಗೆಣಸು ಫಸಲನ್ನು ಕಾಡಾನೆಗಳ ಹಿಂಡು ತುಳಿದು, ತಿಂದು ನಾಶಪಡಿಸಿವೆ. ಇದರಿಂದಾಗಿ ಕೃಷಿಕರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಕಳೆದ ಮೂರು ದಿನಗಳ ಹಿಂದೆ ಇದೇ ಹಾಡಿಯ ರಂಗಯ್ಯ ಎಂಬವರು ಬೆಳೆದಿದ್ದ ಜೋಳದ ಫಸಲನ್ನು ಕಾಡಾನೆಗಳು ತಿಂದು ತುಳಿದು ನಾಶಪಡಿಸಿದ್ದವು. ಪ್ರತೀ ವರ್ಷವೂ ಕಾಡಾನೆಗಳಿಂದ ಇಲ್ಲಿನ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದರೂ ಕೂಡ ಅರಣ್ಯ ಇಲಾಖೆ ಕಾಡಾನೆಗಳನ್ನು ನಿಯಂತ್ರಿಸಲು ಕ್ರಮವಹಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅರಣ್ಯ ಇಲಾಖೆ ಬೆಳೆ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.