ಮಡಿಕೇರಿ, ಆ. ೨೩: ಅಂಗನವಾಡಿ, ಶಾಲೆ ಹಾಗೂ ಕಾಲೇಜು ವ್ಯಾಪ್ತಿಯಲ್ಲಿ ಅಪಾಯ ದಲ್ಲಿರುವ ಮರಗಳನ್ನು ತೆರವುಗೊಳಿಸಲು ಅಗತ್ಯ ಕ್ರಮವಹಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ಸೂಚಿಸಿದ್ದಾರೆ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ವೀಡಿಯೋ ಸಂವಾದ ಮೂಲಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇನ್ನೂ ೧೦-೧೨ ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ಬಿರುಗಾಳಿ ಸಹ ಇರಲಿದೆ. ಆದ್ದರಿಂದ ಈ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ನಿರ್ದೇಶನ ನೀಡಿದರು. ಹಳೆ ಮರಗಳನ್ನು ತೆರವುಗೊಳಿಸಲು ಜಿ.ಪಂ. ಸಿಇಓ ಅವರ ಮೂಲಕ ಅರಣ್ಯ ಇಲಾಖೆಗೆ ಪತ್ರ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಸೂಚಿಸಿದರು.

ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ರಸ್ತೆಗಳು ಗುಂಡಿಮಯವಾಗಿದ್ದು, ಮಳೆ ಮುಗಿದ ನಂತರ ರಾಜ್ಯ, ಜಿಲ್ಲಾ ಹಾಗೂ ಗ್ರಾಮೀಣ ವ್ಯಾಪ್ತಿಯ ರಸ್ತೆಗಳ ಗುಂಡಿಮುಚ್ಚುವ ಕಾರ್ಯವಾಗಬೇಕಿದೆ. ಆ ನಿಟ್ಟಿನಲ್ಲಿ ಇಂಜಿನಿಯರ್‌ಗಳು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.

ನಗರ, ಪಟ್ಟಣ ಪ್ರದೇಶದಲ್ಲಿಯೂ ರಸ್ತೆಗಳು ಗುಂಡಿಬಿದ್ದಿದೆ. ಇದನ್ನು ಸರಿಪಡಿಸಬೇಕು. ಹಾಗೆಯೇ ವಿದ್ಯುತ್ ಮಾರ್ಗಗಳ ಸಮರ್ಪಕ ನಿರ್ವಹಣೆ ಮತ್ತಿತರ ವಿಷಯಗಳ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಿರ್ದೇಶನ ನೀಡಿದರು.

ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು, ವಿವಿಧ ಇಲಾಖೆ ಇಂಜಿನಿಯರ್‌ಗಳು ಇತರರು ವೀಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾಹಿತಿ ನೀಡಿದರು.