ಸೋಮವಾರಪೇಟೆ, ಆ. ೧೯: ಕಳೆದ ತಾ. ೧೭ರಂದು ರಾತ್ರಿ ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೀದಳ್ಳಿ ಗ್ರಾಮದಲ್ಲಿರುವ ಹೈಡಲ್ ಪವರ್ ಪ್ರಾಜೆಕ್ಟ್ನ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಮೃತದೇಹ ಇಂದು ಮಧ್ಯಾಹ್ನದ ವೇಳೆಗೆ ಕುಮಾರಧಾರ ನದಿಯಲ್ಲಿ ಪತ್ತೆಯಾಗಿದೆ.

ಪವರ್ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡಿಕೊಂಡಿದ್ದ ಪಟ್ಟಣ ಸಮೀಪದ ದೊಡ್ಡಹಣಕೋಡು ಗ್ರಾಮದ ಪೊನ್ನಪ್ಪ-ವಸಂತಿ ದಂಪತಿಯ ಪುತ್ರ ಚಿದಾನಂದ (೨೫) ಅವರ ಮೃತದೇಹ ಡ್ಯಾಂನಿAದ ಅರ್ಧ ಕಿ.ಮೀ. ದೂರದಲ್ಲಿ, ನದಿ ಪಕ್ಕದ ಮರದ ಬುಡಕ್ಕೆ ಸಿಲುಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಹರಿಯುತ್ತಿರುವ ನದಿ, ಭಾರೀ ಮಳೆಯ ನಡುವೆಯೂ ಹರಸಾಹಸ ಪಟ್ಟು ಸ್ಥಳೀಯರು ಮೃತದೇಹವನ್ನು ಇಂದು ಮಧ್ಯಾಹ್ನದ ವೇಳೆಗೆ ಪತ್ತೆ ಹಚ್ಚಿದ್ದಾರೆ.

ತಾ. ೧೭ರ ರಾತ್ರಿ ಸ್ನೇಹಿತನಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ ಕಳುಹಿಸಿದ್ದ ಚಿದಾನಂದ್ ನಂತರ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ನಿನ್ನೆ ಬೆಳಿಗ್ಗೆ ಪವರ್ ಪ್ರಾಜೆಕ್ಟ್ ಘಟಕದ ಸಿ.ಸಿ. ಕ್ಯಾಮರಾ ಪರಿಶೀಲಿಸಿದ ಸಂದರ್ಭ, ಚಿದಾನಂದ್ ಡ್ಯಾಂನ ಬಳಿಗೆ ತೆರಳಿರುವುದು ಸೆರೆಯಾಗಿದ್ದು, ನಂತರದ ಮಾಹಿತಿ ಲಭಿಸಿರಲಿಲ್ಲ. ಈ ಹಿನ್ನೆಲೆ ಡ್ಯಾಂಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂಶಯಿಸಲಾಗಿತ್ತು.

ನಿನ್ನೆ ದಿನ ಸೋಮವಾರಪೇಟೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಮುಳುಗು ತಜ್ಞರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಬ್ಬಿಣದ ಕೊಕ್ಕೆಗಳನ್ನು ಬಳಸಿ ಡ್ಯಾಂನಲ್ಲಿ ಶೋಧ ಕಾರ್ಯ ನಡೆಸಿದ್ದರೆ, ರಿವರ್ ರ‍್ಯಾಫ್ಟರ್‌ಗಳನ್ನು ಬಳಸಿಕೊಂಡು ಸ್ಥಳೀಯರು ಹೊಳೆಯಲ್ಲಿ ಹುಡುಕಾಟ ನಡೆಸಿದ್ದರು. ಭಾರೀ ಮಳೆಯಿಂದಾಗಿ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದ ಹಿನ್ನೆಲೆ ಕಾರ್ಯಾಚರಣೆಗೆ ತೊಡಕಾಗಿತ್ತು.

ಇಂದು ಬೆಳಗ್ಗಿನಿಂದಲೇ ಬೀದಳ್ಳಿ ಗ್ರಾಮದ ಯುವಕರಾದ ಪುಟ್ಟ, ಪ್ರವೀಣ್, ಕಿರಣ್, ರವಿ, ವಿನೋದ್, ದೀಕ್ಷಿತ್ ಹಾಗೂ ಗಿರೀಶ್ ಅವರುಗಳ ತಂಡ ಕುಮಾರಧಾರ ನದಿಯ ತಟದಲ್ಲಿ ಶೋಧಕಾರ್ಯ ಕೈಗೊಂಡಿದ್ದು, ಭಾರೀ ಮಳೆಯ ನಡುವೆಯೂ ಹರಸಾಹಸ ಪಟ್ಟು ಮಧ್ಯಾಹ್ನದ ವೇಳೆಗೆ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ನದಿ ತಟದ ಮರದ ಬುಡದಲ್ಲಿ ಸಿಲುಕಿಕೊಂಡಿದ್ದ ಚಿದಾನಂದನ ಮೃತದೇಹವನ್ನು ಮೇಲೆತ್ತಿದ್ದಾರೆ.

ಕುಮಾರಧಾರ ನದಿಗೆ ಡ್ಯಾಂ ನಿರ್ಮಿಸಿ ಪವರ್ ಪ್ರಾಜೆಕ್ಟ್ ಘಟಕ ಆರಂಭಿಸಿದ್ದು, ಹೊಳೆಯಿಂದ ಡ್ಯಾಂಗೆ ಹರಿದು ಬರುವ ನೀರು ಟರ್ಬೇನ್‌ಗೆ ಹೋಗಿ, ನಂತರ ಹೊಳೆಗೆ ವಾಪಸ್ ಆಗುವ ಹೊರ ಹರಿವಿಗೆ ಚಿದಾನಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿದೆ.

ಕಳೆದ ತಾ. ೧೭ರಂದು ಹಗಲು ತನ್ನ ಕುಟುಂಬದವರ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಚಿದಾನಂದ, ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸಲು ಮನೆಯಿಂದ ಸಂಜೆ ೫ ಗಂಟೆ ಸುಮಾರಿಗೆ ಬೀದಳ್ಳಿ ಗ್ರಾಮದ ಪವರ್ ಪ್ರಾಜೆಕ್ಟ್ ಸ್ಥಳಕ್ಕೆ ತೆರಳಿದ್ದರು. ರಾತ್ರಿ ೧೦ಗಂಟೆ ಸುಮಾರಿಗೆ ತನ್ನ ಸ್ನೇಹಿತನೋರ್ವನಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೊಬೈಲ್ ಮೂಲಕ ಸಂದೇಶ ರವಾನಿಸಿ ನಾಪತ್ತೆಯಾಗಿದ್ದರು.

ಇಂದು ಮೃತದೇಹ ಪತ್ತೆಯಾದ ನಂತರ ಸ್ಥಳೀಯರು ಸೋಮವಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತನ ಕುಟುಂಬ ಸದಸ್ಯರೊಂದಿಗೆ ಸ್ಥಳ ಪರಿಶೀಲಿಸಿದ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಘಟನೆಯ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.