ಸೋಮವಾರಪೇಟೆ, ಆ. ೧೬: ರೈತರ ನೆಮ್ಮದಿ ಕಸಿಯುವಂತೆ ಮಾಡಿರುವ ಸಿ ಮತ್ತು ಡಿ ಜಾಗದ ಸಮಸ್ಯೆಗಳ ಬಗ್ಗೆ ಜಿಲ್ಲಾ ಕಾಂಗ್ರೆಸ್ ನಿಯೋಗವು, ಈರ್ವರು ಶಾಸಕರುಗಳ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯಿತು.

ಮಡಿಕೇರಿಯಲ್ಲಿ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ ಪಕ್ಷದ ಪ್ರಮುಖರು, ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಹೋರಾಟಗಳು ನಡೆಯುತ್ತಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರುಗಳ ಸಮ್ಮುಖದಲ್ಲಿ ಸಿ ಮತ್ತು ಡಿ ಜಾಗದ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದರು.

ಸಿ ಮತ್ತು ಡಿ ಜಾಗದ ಸಮಸ್ಯೆಯಿಂದ ರೈತರಿಗೆ ಉಂಟಾಗಿರುವ ಅನಾನುಕೂಲಗಳ ಬಗ್ಗೆ ಸಭೆಯಲ್ಲಿ ರೈತರ ಪರವಾಗಿ ಧ್ವನಿ ಎತ್ತಿದ ಕೊಡಗು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ. ಎಂ. ಲೋಕೇಶ್, ಈ ವಿಚಾರದ ಬಗ್ಗೆ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ರೈತರ ಆತಂಕವನ್ನು ದೂರ ಮಾಡುವಂತೆ ಉಸ್ತುವಾರಿ ಸಚಿವರು ಹಾಗೂ ಶಾಸಕದ್ವಯರಿಗೆ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಉಸ್ತುವಾರಿ ಸಚಿವರು, ಸಿ ಮತ್ತು ಡಿ ಜಾಗದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಿತಿ ರಚನೆ ಮಾಡಲಾಗುವುದು.

ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಕಾಂಗ್ರೆಸ್ ಮುಖಂಡರುಗಳೊAದಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಾಗುವುದೆಂದರು.

ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಸೋಮವಾರ ಸದನದಲ್ಲಿ ಸಿ ಮತ್ತು ಡಿ ಜಾಗದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗುವುದೆಂದರು. ಈ ಸಭೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಕಾಂಗ್ರೆಸ್ ಮುಖಂಡರಾದ ಕೆ.ಪಿ. ಚಂದ್ರಕಲಾ, ಸೋಮವಾರಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಜೆ.ಎಲ್. ಜನಾರ್ದನ್, ಕಾಂಗ್ರೆಸ್ ಮುಖಂಡರಾದ ಟಿ. ಪಿ. ರಮೇಶ್, ಕೊಲ್ಯದ ಗಿರೀಶ್, ನಟೇಶ್ ಗೌಡ, ಖಾಲಿದ್, ಮಡಿಕೇರಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಉಪಸ್ಥಿತರಿದ್ದರು.