ಧರ್ಮಕ್ಷೇತ್ರಕ್ಕೇ ಈಗ ಅಗ್ನಿಪರೀಕ್ಷೆಯ ಸಮಯ... ನ್ಯಾಯ ನೀಡುವ ಕ್ಷೇತ್ರಕ್ಕೇ ನ್ಯಾಯ ಕೊಡಿ ಎಂದು ಕೇಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಧರ್ಮಸ್ಥಳ ಈಗ ಒಂದಿಲ್ಲೊAದು ಕಾರಣದಿಂದ ಸುದ್ದಿಯಾಗುತ್ತಿದೆ. ಧಾರ್ಮಿಕ ವಿಚಾರಗಳಿಗೆ ಸುದ್ದಿಯಲ್ಲಿದ್ದ ಕ್ಷೇತ್ರವೊಂದು ಈಗ ವಿವಾದದ ಕಾರಣದಿಂದ ನಿತ್ಯ ಸುದ್ದಿಯಲ್ಲಿದೆ.

ಅದು ಧರ್ಮಸ್ಥಳ ಅಂಥಲ್ಲ. ಯಾವುದೇ ಕ್ಷೇತ್ರ, ಯಾವುದೇ ಸಂಸ್ಥೆ ಅಥವಾ ಯಾವುದೇ ವ್ಯಕ್ತಿಯಾಗಲಿ.. ಹತ್ತಾರು ವರ್ಷಗಳಿಂದ ನೂರಾರು ರೀತಿಯಲ್ಲಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯರಾಗಿದ್ದು, ಲಕ್ಷಾಂತರ ಮಂದಿಗೆ ಸಹಾಯ ಮಾಡಿದ್ದರೂ ಕೊನೆಗೊಂದು ದಿನ ಯಾರೇ, ಎಷ್ಟೇ ಪ್ರಬಾವಿಯಾಗಿದ್ದರೂ ಸಮಾಜದ ಕೆಲವರಿಂದ ಎದುರಾಗುವ ಟೀಕೆ ಟಿಪ್ಪಣಿಗಳು, ಆರೋಪಗಳು ಎಂಬ ಅಗ್ನಿಪರೀಕ್ಷೆಗೆ ಒಳಗಾಗಲೇ ಬೇಕು. ಇಂಥ ಅಗ್ನಿಪರೀಕ್ಷೆಯ ದಿನಗಳಲ್ಲಿ ಅಂಥವರು ಮಾಡಿದ ಎಷ್ಟೇ ದೊಡ್ಡ ಸಾಮಾಜಿಕ ಸೇವೆಯಾಗಿದ್ದರೂ ಅದು ಟೀಕಾಕಾರರಿಂದಾಗಿ ಸಮಾಜದ ಮುಂದೆ ನಗಣ್ಯವಾಗಿಬಿಡುತ್ತದೆ. ಅದೆಲ್ಲಾ ಮಾಡಿದ್ದು ಸ್ವಾರ್ಥಕ್ಕಾಗಿ, ತಪ್ಪನ್ನು ಮುಚ್ಚಿಕೊಳ್ಳಲೋಸ್ಕರವಾಗಿ ಎಂಬ ವಾದವೊಂದೇ ಇಂಥ ಸಾಮಾಜಿಕ ಸುಧಾರಕರ ಬಗ್ಗೆ ಕೆಟ್ಟ ರೀತಿಯ ಸಂದೇಶ ಹರಡಲು ಕಾರಣವಾಗುತ್ತದೆ.

ಧರ್ಮಸ್ಥಳದ ವಿಚಾರಕ್ಕೆ ಬರುವುದಾದಲ್ಲಿ, ಶತಮಾನದಿಂದಲೂ ಧರ್ಮಸ್ಥಳ ಎಂಬ ಶ್ರೀಕ್ಷೇತ್ರದಲ್ಲಿ ಶ್ರೀ ಮಂಜುನಾಥ ಸ್ವಾಮಿ, ಶ್ರೀ ಅಣ್ಣಪ್ಪ ದೈವಗಳಿಗೆ ಪೂಜೆ ಸಾಗಿದ್ದು, ಭಾರತಾದ್ಯಂತದಿAದಲೂ ಧರ್ಮಕ್ಷೇತ್ರಕ್ಕೆ ದಿನನಿತ್ಯವೂ ಸಾವಿರಾರು ಭಕ್ತರು ಬಂದು ಪ್ರಾರ್ಥನೆ, ಪೂಜೆ ಸಲ್ಲಿಸುತ್ತಾರೆ. ಗಣ್ಯಾತಿಗಣ್ಯರಿಂದ ಮೊದಲ್ಗೊಂಡು ಸಾಮಾನ್ಯರೂ ಈ ಕ್ಷೇತ್ರದ ಮೇಲೆ ನಂಬಿಕೆ ಇರಿಸಿದ್ದಾರೆ. ಹಿಂದೂಗಳೂ ಮಾತ್ರವಲ್ಲ, ಸರ್ವಧರ್ಮೀಯರೂ ಧರ್ಮಸ್ಥಳದ ಮೇಲೆ ಅಪಾರವಾದ ನಂಬಿಕೆ ಹೊಂದಿದ್ದಾರೆ.

ಇAಥ ಕ್ಷೇತ್ರದ ಮೇಲೆ ಕೆಲವು ವರ್ಷಗಳಿಂದ ವಿವಾದದ ಕಿಡಿಗಳು ಕಾಣಲಾರಂಭಿಸಿದ್ದವು. ಇಂಥ ಕಿಡಿಗಳು ಸೃಷ್ಟಿಯಾದದ್ದು ಬೇರೆಲ್ಲೂ ಅಲ್ಲ, ಧರ್ಮಸ್ಥಳದಲ್ಲಿಯೇ ವಿವಾದದ ಕಿಡಿ ಹೊತ್ತಿ.. ಹೊಗೆಯಾಡತೊಡಗಿತ್ತು. ಧರ್ಮಸ್ಥಳ ಕ್ಷೇತ್ರದ ಮುಖ್ಯಸ್ಥರ ಕುಟುಂಬದ ಸದಸ್ಯರ ಮೇಲೆ ಸಂಶಯದ ನೋಟ, ವದಂತಿಗಳು ಪುಂಖಾನುಪುAಖವಾಗಿ ಕೇಳಿಬರಲಾರಂಭಿಸಿದವು. ಧರ್ಮಸ್ಥಳ ವ್ಯಾಪ್ತಿಯಲ್ಲಿ ಉಂಟಾದ ಕೆಲವೊಂದು ದುರಂತ, ಅಪರಾಧಗಳಿಗೆಲ್ಲಾ ಧರ್ಮಸ್ಥಳ ಕ್ಷೇತ್ರದ ಮುಖ್ಯಸ್ಥರನ್ನೇ ಹೊಣೆ ಮಾಡಲಾಯಿತು. ಇವೆಲ್ಲಾ ಬಹಿರಂಗವಾಗಿ ಅಲ್ಲದಿದ್ದರೂ ಸಾಮಾಜಿಕ ಜಾಲತಾಣ ಎಂಬ ಆಧುನಿಕ ಮಾಧ್ಯಮ ವ್ಯವಸ್ಥೆಯಲ್ಲಿ ಕಿಡಿಯನ್ನು ಬೆಂಕಿಯನ್ನಾಗಿಸಿ ಊರನ್ನೆಲ್ಲಾ ದಹಿಸುವ ಪ್ರಕ್ರಿಯೆ ಪ್ರಾರಂಭವಾಯಿತು.

ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದ ಕೆಲವೊಂದು ಯುವತಿಯರ ಹತ್ಯೆ, ಅತ್ಯಾಚಾರ ಪ್ರಕರಣಗಳಿಗೆ ಕ್ಷೇತ್ರದತ್ತ ಬೆಟ್ಟು ಮಾಡಲಾಯಿತು. ನ್ಯಾಯದಾನಕ್ಕಾಗಿ ಅಭಿಯಾನ ಪ್ರಾರಂಭವಾಯಿತು. ಹೀಗಿದ್ದರೂ ಸೂಕ್ತ ಸಾಕ್ಷಾö್ಯಧಾರಗಳಿಲ್ಲದೆ, ಇಂಥವರು ಆರೋಪ ಮಾಡತೊಡಗಿದ್ದರು.

ಧರ್ಮಸ್ಥಳಕ್ಕೆ ಅಗ್ನಿಪರೀಕ್ಷೆ ಪ್ರಾರಂಭವಾಗಿದ್ದೇ ಇಲ್ಲಿ. ಕೆಲವು ವರ್ಷಗಳಿಂದ ಕೇಳಿಬರುತ್ತಿದ್ದ ಆರೋಪಗಳು ಯಾವಾಗ ಮಿತಿ ಮೀರತೊಡಗಿದವೋ, ಸಾಮಾಜಿಕ ಜಾಲತಾಣಗಳು ಯಾವಾಗ ಧರ್ಮಕ್ಷೇತ್ರದ ವಿರುದ್ದ ಹೋರಾಟದ ತೀರ್ಪು ನೀಡಿಕೆ, ಕ್ಷೇತ್ರದವರೇ ಅಪರಾಧಿಗಳು ಎಂದು ಬಿಂಬಿಸತೊಡಗಿದವೋ, ಆವರೆಗೂ ಕ್ಷೇತ್ರದ ಭಕ್ತರಾಗಿದ್ದವರಿಗೂ ಸ್ವಲ್ಪ ಅನುಮಾನ ಬರತೊಡಗಿತ್ತು. ಹೀಗೂ ಆಗಿರಬಹುದಾ ಎಂಬ ಮಾನವ ಸಹಜ ಪ್ರಶ್ನೆಗಳೂ ಕೆಲವೊಂದು ಭಕ್ತರನ್ನು ಕಾಡಿದ್ದು ಸತ್ಯ. ಸಹಜ ಕೂಡ. ಇದರಿಂದಾಗಿಯೇ ಪ್ರಾರಂಭಿಕ ಹಂತದಲ್ಲಿ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ, ಧರ್ಮಸ್ಥಳದ ಪರ ಜನರು ನಿಲ್ಲಲಿಲ್ಲ. ಭಕ್ತಾಧಿಗಳಿಂದ ನಿರೀಕ್ಷಿತ ಬೆಂಬಲವೂ ಆರಂಭಿಕವಾಗಿ ಕ್ಷೇತ್ರಕ್ಕೆ ಲಭಿಸಲಿಲ್ಲ ಎಂಬುದೂ ಗಮನಾರ್ಹ. ಇದನ್ನೇ ದಾಳವಾಗಿ ಬಳಸಿಕೊಂಡ ಕ್ಷೇತ್ರ ವಿರೋಧಿ ಪಡೆ ತಾವು ಮಾಡಿದ್ದೇ ಆರೋಪಗಳು ಎಂಬAತೆ ಮತ್ತಷ್ಟು ಅಪಪ್ರಚಾರದಲ್ಲಿ ತೊಡಗಿತ್ತು.

ಕರ್ನಾಟಕ ರಾಜ್ಯ ಸರ್ಕಾರಕ್ಕೂ ಧರ್ಮಸ್ಥಳ ವಿಚಾರದಲ್ಲಿ ತನಿಖೆಗೆ ಒತ್ತಡ ಆರಂಭವಾಗಿತ್ತು. ಯಾವಾಗ ಅನಾಮಧೇಯ ವ್ಯಕ್ತಿಯೋರ್ವ ತಲೆಬುರುಡೆ ಹಿಡಿದುಕೊಂಡು ಠಾಣೆ ಮುಂದೆ ಬಂದು ನಾನೇ ಸಾಕ್ಷಿ ಎಂದನೋ ಸರ್ಕಾರ ಕೂಡ ಇದೇ ಸಮಯಕ್ಕೆ ಕಾಯುತ್ತಿರುವಂತೆಯೇ ಎಸ್ ಐ ಟಿ ಎಂಬ ತನಿಖಾ ಸಂಸ್ಥೆಗೆ ಧರ್ಮಸ್ಥಳದ ವಿವಾದವನ್ನು ಒಪ್ಪಿಸಿ ಹಗುರಾಯಿತು.

ಎಸ್ ಐ ಟಿ ತನಿಖೆಗೊಪ್ಪಿಸಿದ ಸರ್ಕಾರದ ತೀರ್ಮಾನವನ್ನು ಈಗ ಖಂಡಿಸುತ್ತಿರುವವರು ಒಂದು ಅಂಶವನ್ನು ನೆನಪಿಟ್ಟುಕೊಳ್ಳಲೇಬೇಕು. ಈ ತನಿಖೆ ಖಂಡಿತಾ ಸೂಕ್ತವಾದದ್ದು, ಸರ್ಕಾರದ ತನಿಖೆಯಿಂದ ಯಾರು ತಪ್ಪಿತಸ್ಥರು, ಯಾರು ನಿರಪರಾಧಿಗಳು ಎಂಬುದು ಬಹಿರಂಗವಾಗುತ್ತದೆ. ಅಪರಾಧಿಗಳಿದ್ದರೆ ಅವರು ಬೆಳಕಿಗೆ ಬರುತ್ತಾರೆ. ಧರ್ಮಸ್ಥಳ ವ್ಯಾಪ್ತಿಯಲ್ಲಿ ಅತ್ಯಾಚಾರ, ಕೊಲೆಗಳು ನಡೆದಿದ್ದರೆ ಅಂಥ ದೇಹಗಳ ಅಸ್ಥಿ ಪಂಜರ ಮಣ್ಣಿನಿಂದ ಹೊರಬಂದು ಭವಿಷ್ಯದಲ್ಲಿ ಸತ್ಯ ಹೇಳಲು ಕಾರಣವಾಗುತ್ತದೆ.

ತನಿಖೆ ಆಗದೇ ಹೋಗಿದ್ದರೆ ಏನಾಗುತ್ತಿತ್ತು?

ಧರ್ಮಸ್ಥಳದ ಮೇಲಿನ ಆರೋಪಗಳು ಹೀಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚುತ್ತಲೇ ಹೋಗುತ್ತಿದ್ದವು. ಅಪಪ್ರಚಾರ ಮತ್ತಷ್ಟು ಕಾವು ಪಡೆದು ನಿಜಸತ್ಯದ ಮೇಲೆ ಸುಳ್ಳಿನ ತಾಂಡವ ಸ್ವರೂಪ ಪಡೆಯುತ್ತಿತ್ತು. ಸರ್ಕಾರವು ಧರ್ಮಸ್ಥಳ ಕ್ಷೇತ್ರದ ಪಕ್ಷಪಾತಿ ಎಂಬ ಟೀಕೆಗಳು ಸದಾ ಇರುತ್ತಿದ್ದವು. ಧರ್ಮಸ್ಥಳದಲ್ಲಿನ ಸತ್ಯವನ್ನು ಹೂಳಲಾಗಿದೆ. ಆರೋಪಿಗಳನ್ನು ಸಂರಕ್ಷಿಸಲಾಗಿದೆ ಎಂಬ ಆರೋಪಗಳು ಭವಿಷ್ಯದಲ್ಲಿಯೂ ಕೇಳಿಬರುತ್ತಿದ್ದವು.

ಈಗ, ಎಸ್ ಐ ಟಿ ತನಿಖೆ ನಡೆಯುತ್ತಿದೆ. ಸತ್ಯ ಏನೆಂದು ತನಿಖಾಧಿಕಾರಿಗಳು ಬಹಿರಂಗಗೊಳಿಸಲಿದ್ದಾರೆ. ಸಾರ್ವಜನಿಕವಾಗಿಯೇ ಅನಾಮಿಕ ಹೇಳಿದ ೧೭ ಸ್ಥಳಗಳಲ್ಲಿ ಗುಂಡಿ ತೋಡಲಾಗಿದೆ. ಪುರುಷನ ಅಸ್ಥಿಪಂಜರವೊAದು ಮಣ್ಣಿನಡಿ ದೊರಕಿದ್ದು ಬಿಟ್ಟರೆ ಬೇರೆ ಯಾವುದೇ ಪ್ರಬಲ ಸಾಕ್ಷ್ಯ ದೊರಕಿಲ್ಲ. ಎಸ್ ಐ ಟಿ ರಚನೆಯಾಗಿ ೧೫ ದಿನಗಳಾಗಿದ್ದು, ಯಾರೇ ದೂರುದಾರರಿದ್ದರೂ ನಿರ್ಭಯವಾಗಿ ಕಚೇರಿಗೆ ಬಂದು ದೂರು ಸಲ್ಲಿಸಿ, ನಾವು ಪಾರದರ್ಶಕವಾಗಿ ತನಿಖೆ ಕೈಗೊಳ್ಳುತ್ತೇವೆ ಎಂಬ ತನಿಖಾ ಸಂಸ್ಥೆಯ ಕೋರಿಕೆಗೆ ೩ ಮಂದಿ ಬಿಟ್ಟರೆ ಬೇರೆ ಯಾವುದೇ ದೂರುದಾರರು ಈವರೆಗೂ ಮುಂದೆ ಬರಲಿಲ್ಲ.

ಹಾಗಿದ್ದಲ್ಲಿ, ಧರ್ಮಸ್ಥಳ ವ್ಯಾಪ್ತಿಯಲ್ಲಿ ಹತ್ತಲ್ಲ. ನೂರಾರು ಶವಗಳನ್ನು ಹೂತಿದ್ದೇನೆ ಎಂಬ ಅನಾಮಿಕನ ಹೇಳಿಕೆ ಸತ್ಯವೇ? ಸಾಮಾಜಿಕ ಜಾಲತಾಣಗಳಲ್ಲಿ ಈವರೆಗೂ ಪುಂಖಾನುಪುAಖವಾಗಿ ಪ್ರಚಾರ ಮಾಡಿದ್ದು ಏನಾಯಿತು? ಯಾವ ಆಧಾರದಲ್ಲಿ ಇಂಥ ವದಂತಿಗಳನ್ನು ಧರ್ಮಕ್ಷೇತ್ರದ ವಿರುದ್ದ ಹಬ್ಬಿಸಲಾಯಿತು? ಯಾಕಾಗಿ ಶ್ರೀಕ್ಷೇತ್ರವನ್ನೇ ಟಾರ್ಗೇಟ್ ಮಾಡಲಾಯಿತು? ಏನೇ ಇರಲಿ, ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾರಿಗೇ ಶಿಕ್ಷೆಯಾಗಬೇಕಾಗಿದ್ದರೂ ಅಂತಿಮವಾಗಿ ನ್ಯಾಯಾಲಯ ಕೇಳುವುದು ಈ ಅಪರಾಧಕ್ಕೆ ನಿನ್ನಲ್ಲಿ ಸಾಕ್ಷಿ ಏನಿದೆ ?

ಹಾಗಿದ್ದರೆ, ಯಾವುದೇ ಸಾಕ್ಷಿಗಳೇ ಇಲ್ಲದೇ, ಹೆಣಗಳನ್ನು ಹೂತಿದ್ದೇ ತಿಳಿಯದೇ ಸುಖಾಸುಮ್ಮನೆ ಶ್ರೀಕ್ಷೇತ್ರವನ್ನು ಟೀಕಾಸ್ತ್ರಗಳಿಗೆ ಗುರಿ ಮಾಡಲಾಯಿತೇ? ಈ ರೀತಿ ಸರ್ವ ಧರ್ಮೀಯರ ಕ್ಷೇತ್ರವೊಂದನ್ನು, ಗುರಿ ಮಾಡುತ್ತಿರುವುದಾದರೂ ಯಾಕಾಗಿ?

ತಮ್ಮ ಪಾಡಿಗೆ ತಾವು ಧಾರ್ಮಿಕ ವಿಚಾರಗಳಲ್ಲಿ, ವೈದ್ಯಕೀಯ, ಇಂಜಿನಿಯರಿAಗ್, ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ, ಮಧ್ಯ ವ್ಯಸನಿಗಳ ಚಟ ಬಿಡಿಸಿ ಮಹಿಳೆಯರ ಕಣ್ಣೀರೊರೆಸುವ ಕೈಂಕರ್ಯವನ್ನು ನಿಷ್ಟೆಯಿಂದ ಮಾಡುತ್ತಾ ಬಂದಿದ್ದ, ಅಂತೆಯೇ ವಿವಿಧ ಯೋಜನೆಗಳ ಮೂಲಕ ಆರ್ಥಿಕವಾಗಿ ಮಹಿಳೆಯರನ್ನು ಸ್ವಾಭಿಮಾನಿ, ಸ್ವಾವಲಂಭಿಗಳನ್ನಾಗಿ ಮಾಡಿದ ಶ್ರೀಕ್ಷೇತ್ರದ ಧರ್ಮಾಧಿಕಾರಿಗಳ ಈ ಸಾಮಾಜಿಕ ಕಾರ್ಯಗಳೇ ಕೆಲವರ ನೆಮ್ಮದಿ ಕೆಡಿಸಿತ್ತಾ? ಇಂಥ ವದಂತಿ, ಟೀಕೆಗಳಿಂದ ಶ್ರೀಕ್ಷೇತ್ರಕ್ಕೆ ಉಂಟಾಗುವ ಹಾನಿಯಿಂದ ಯಾರಿಗೆ ಲಾಭ? ಧರ್ಮ, ಸತ್ಯ, ನಿಷ್ಟೆ, ಸಾಮಾಜಿಕ ಪರಿವರ್ತನೆ ಇತ್ಯಾಧಿ ಸೇವೆ ಮಾಡುವುದೇ ತಪ್ಪೇ?

ಆಯಿತು, ಶ್ರೀಕ್ಷೇತ್ರದವರು ತಪ್ಪು ಮಾಡಿದ್ದಾರೆ. ಅವರ ಕುಟುಂಬಸ್ಥರು ಕೆಲವರಿಗೆ ಅನ್ಯಾಯ ಎಸಗಿದ್ದಾರೆ. ನ್ಯಾಯ ಕೇಳಬೇಕು ಅನ್ನಿಸಿದೆ ಎಂದು ಕೆಲವರಿಗೆ ಅನ್ನಿಸಿದೆ ಎಂದಿಟ್ಟುಕೊಳ್ಳೋಣ.. ಅಂಥವರು, ನ್ಯಾಯಾಂಗ ವ್ಯವಸ್ಥೆಗನುಗುಣವಾಗಿ ಸೂಕ್ತ ಸಾಕ್ಷ್ಯಗಳೊಂದಿಗೆ ಸಂಬAಧಿತ ನ್ಯಾಯಾಲಯಗಳ ಕದ ತಟ್ಟಲು ಸರ್ವಸ್ವಾತಂತ್ರ‍್ಯರಿದ್ದರಲ್ಲ? ಅದನ್ನು ಬಿಟ್ಟು, ಯಾಕಾಗಿ ಇಂಥ ವದಂತಿ ಹಬ್ಬಿಸುವ ಕಾರ್ಯಾಚರಣೆ?

ಅಕಸ್ಮಾತ್ ಕ್ಷೇತ್ರ ವ್ಯಾಪ್ತಿಯಲ್ಲಿ ಹತ್ತಾರು, ನೂರಾರು ಅಸ್ಥಿಪಂಜರಗಳು ಸಿಕ್ಕಿದ್ದವು ಎಂದೇ ಇಟ್ಟುಕೊಳ್ಳೋಣ.. ಸಿಕ್ಕಿದ್ದರೂ ಅದು ಯಾರಿಗೆ ಸೇರಿದ್ದು, ಹೇಗೆ ಸತ್ತರು? ಯಾರಿಂದಾದಲೂ ಹತ್ಯೆಯಾಯಿತೇ? ಯಾರು ಹತ್ಯೆ ಮಾಡಿದ್ದು ಎಂಬುದರ ಬಗ್ಗೆ ಅಂತಿಮವಾಗಿ ತನಿಖಾಸಂಸ್ಥೆಗಳು ಸಾಕ್ಷಾö್ಯಧಾರಗಳನ್ನು ಆಧರಿಸಿಯೇ ನ್ಯಾಯಾಲಯದ ಮುಂದೆ ತನಿಖೆಯ ಅಂಶಗಳನ್ನು ಮುಂದಿಡಬೇಕಾಗುತ್ತದೆ. ಕೊನೆಗೇ ನ್ಯಾಯಾಲಯ ಈ ಕುರಿತಂತೆ ಅಂತಿಮ ತೀರ್ಪು ನೀಡುತ್ತದೆಯೇ ವಿನಾ ಈ ದೇಶದಲ್ಲಿ ಸಾಮಾಜಿಕ ಜಾಲತಾಣಗಳು ತೀರ್ಪು ನೀಡುವದಕ್ಕೆ ಅವಕಾಶವಿಲ್ಲ.

ಇನ್ನು ಅನಾಮಿಕ ದೂರುದಾರನ ವಿಚಾರ..

ಈತ ಬೆಳ್ತಂಗಡಿ ಪಂಚಾಯತ್‌ನ ಮಾಜಿ ನೌಕರ. ಬುರುಡೆ ಹಿಡಿದುಕೊಂಡು ಬಂದವನ ಹಿಂದೆ ಬೇರೆಯವರ ಒತ್ತಡವೂ ಇತ್ತು ಎಂಬುದು ಅತ್ಯಂತ ಸ್ಪಷ್ಟ. ಈತ ಹೆಣ ಹೂಳಿದ್ದ ಎಂದಾದಲ್ಲಿ ತಾನೇ ಮಣ್ಣು ತೋಡಿದ್ದ ಜಾಗವನ್ನು ತಾನೇ ಗುರುತಿಸದಾದನೇ? ಸಂಶಯ ಹೆಚ್ಚಾಗುವುದೇ ಇಂಥಲ್ಲಿ. ಒಂದೆರಡು ಕಡೆ ಮರೆವಿನಿಂದ ಸ್ಥಳ ಗುರುತು ತಪ್ಪಿಹೋಗಬಹುದು. ಆದರೆ, ೧೭ ಕ್ಕೆ ೧೭ ಕಡೆಯೂ ಮಹಿಳೆಯ ಅಸ್ಥಿ ಪಂಜರ ದೊರಕಿಲ್ಲ ಎಂದಾದಲ್ಲಿ ಈ ಅನಾಮಿಕ ದೂರುದಾರನಿಗೆ ಏನನ್ನೋಣ?

ಕರ್ನಾಟಕದಲ್ಲಿ ಎಸ್‌ಐಟಿ ತನಿಖಾ ಸಂಸ್ಥೆಗೆ ಬಹಳ ದೊಡ್ಡ ಹೆಸರಿದೆ. ಪ್ರಣವ್ ಮೊಹಾಂತಿ ಇದರ ಮುಖ್ಯಸ್ಥರಾಗಿದ್ದಾರೆ. ಕೊಡಗಿನಲ್ಲಿ ಈ ಮೊದಲು ಪೊಲೀಸ್ ವರಿಷ್ಟಾಧಿಕಾರಿಯಾಗಿದ್ದ ಅನುಚೇತ್ ಅವರಂಥ ದಕ್ಷ ಅಧಿಕಾರಿಯೂ ಎಸ್ ಐ ಟಿ ತಂಡದಲ್ಲಿದ್ದಾರೆ. ಇಂಥ ಡೇರ್ ಡೆವಿಲ್ ಅಧಿಕಾರಿಗಳನ್ನೇ ಈ ಅನಾಮಿಕ ದೂರುದಾರ.. ಅಲ್ಲಲ್ಲಿ ಸುತ್ತಾಡಿಸುತ್ತಾ. ಇಲ್ಲಿ ಅಗೆಯಿರಿ. ಅಲ್ಲಿ ಗುಂಡಿ ತೆಗೆಯಿರಿ.. ಇಲ್ಲಿ ಹೂತಿದ್ದೆ. ಅಲ್ಲಿ ಹೋಗಿದ್ದೆ ಎಂದು ಮಕ್ಕಳಾಟದಂತೆ ಅಲೆದಾಡಿಸುತ್ತಿರುವುದನ್ನು ನೋಡಿದರೆ ಪೊಲೀಸ್ ಅಧಿಕಾರಿಗಳ ಬಗ್ಗೆಯೇ ಅಯ್ಯೋ ಪಾಪ ಎನಿಸುತ್ತದೆ.

ರಾಜಕಾರಣಿಗಳ ನಡೆ

ಯಾವಾಗ ಧರ್ಮಸ್ಥಳದಲ್ಲಿ ಶವಗಳ ಕುರುಹು ದೊರಕಿಲ್ಲ ಎಂದು ಖಚಿತವಾಯಿತೋ ರಾಜ್ಯ ಬಿಜೆಪಿ ನಾಯಕರು ನಿದ್ದೆಯಿಂದ ಎದ್ದಂತೆ ಧರ್ಮಸ್ಥಳಕ್ಕೆ ತೆರಳಿದರು. ದಿನನಿತ್ಯ ಒಬ್ಬರಲ್ಲ ಒಬ್ಬರು ನಾಯಕರು ಧರ್ಮಸ್ಥಳದ ಪರಕ್ಕಿಂತ ಸರ್ಕಾರದ ವಿರುದ್ದ ಟೀಕಾಪ್ರಹಾರ ಮಾಡತೊಡಗಿದರು.

ಧರ್ಮಸ್ಥಳದ ಪರವಾಗಿ ತಾವಿದ್ದೇವೆ ಎಂದು ಬಿಜೆಪಿಗೆ ಹೇಳಲೇಬೇಕೆನ್ನಿಸಿದ್ದರೆ ಇಷ್ಟು ದಿವಸ ಕಾಯದೇ ಎಸ್ ಐಟಿ ತನಿಖೆ ಪ್ರಾರಂಭವಾದೊಡನೇ ಹಿಂದೂಗಳ ಧಾರ್ಮಿಕ ಕ್ಷೇತ್ರದ ಮೇಲೆ ಇಂಥ ತನಿಖೆ ಮಾಡಬೇಡಿ. ಇದನ್ನು ನಾವು ಖಂಡಿಸುತ್ತೇವೆ. ಎಸ್ ಐ ಟಿ ಬೇಡ ಎಂದು ಬಹಿರಂಗವಾಗಿ ಹೇಳಬೇಕಾಗಿತ್ತು. ಆದರೆ ಹಾಗೇ ಮಾಡದೇ ಎಲ್ಲಿಯಾದರೂ ಹೆಣಗಳ ಕುರುಹು ಸಿಕ್ಕೀತೇ ಎಂದು ಕಾದು ನೋಡಿ, ಕೊನೆಗೆ ಅಂತಿಮ ಘಟ್ಟದಲ್ಲಿ ಜೈಜೈ ಧರ್ಮಸ್ಥಳ ಎನ್ನುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಮುಂದಾಗಿರುವುದು ಸ್ಪಷ್ಟ.

ಕಾಂಗ್ರೆಸ್ ಏನೂ ಹಿಂದೆ ಬಿದ್ದಿಲ್ಲ...

ಈ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈಗ ಸತ್ಯ ಅರ್ಥವಾಗಿದೆ. ಆ ಸತ್ಯ ಏನೆಂದರೆ,

ಮುAದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕಾಗಿದ್ದರೆ ಅಲ್ಪಸಂಖ್ಯಾತರ ಮತಗಳು ಮಾತ್ರವಲ್ಲ ಹಿಂದೂಗಳ ಮತಗಳೂ ಹೆಚ್ಚಿನ ಪ್ರಮಾಣದಲ್ಲಿ ಕ್ರೊಡೀಕರಣವಾಗಲೇಬೇಕಾಗಿದೆ. ಹೀಗಾಗಬೇಕಾದಲ್ಲಿ ಕಾಂಗ್ರೆಸ್ ಕೂಡ ಹಿಂದುತ್ವದ ಪರ ಸ್ವಲ್ಪ ಶಂಖ, ಜಾಗಟೆ ಹೊಡೆಯಲೇಬೇಕು. ಹಿಂಧುತ್ವ ಪರ ಕಾಂಗ್ರೆಸ್ ಕೂಡ ಇದೆ ಎಂದು ನಿರೂಪಿಸದೇ ಹೋದಲ್ಲಿ ಹಿಂದೂ ಮತಗಳು ಕಾಂಗ್ರೆಸ್ ಕೈಹಿಡಿಯಲಾರವು ಎಂಬುದನ್ನು ಡಿಕೆಶಿ ಚೆನ್ನಾಗಿ ತಿಳಿದಿದ್ದಾರೆ.

ಹೀಗಾಗಿಯೇ ಹೈಕಮಾಂಡ್ ಒಪ್ಪದೇ ಇದ್ದರೂ ಡಿಕೆಶಿ, ಪ್ರಯಾಗ್‌ರಾಜ್‌ಗೆ ತೆರಳಿ ಪವಿತ್ರ ಸ್ನಾನ ಮಾಡುತ್ತಾರೆ. ಕೊಯಮತ್ತೂರಿಗೆ ತೆರಳಿ ಗೃಹ ಸಚಿವ ಅಮಿತ್ ಷಾ ಜತೆ ಈಶಾ ಫೌಂಡೇಶನ್‌ನಲ್ಲಿ ಸದ್ಗುರು ಜತೆ ವೇದಿಕೆ ಹಂಚಿಕೊಳ್ಳುತ್ತಾರೆ. ಆಗಿಂದಾಗ್ಗೆ ದೇಶದ ವಿವಿಧ ದೇವಾಲಯಗಳಿಗೆ ತೆರಳಿ, ಆ ಸುದ್ದಿಯನ್ನು ಹೈಲೈಟ್ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ. ಇವೆಲ್ಲದರ ಜತೆ ಈಗ, ನಾನೂ ಧರ್ಮಸ್ಥಳದ ಭಕ್ತ ಎಂದು ಹೇಳಿ, ಎಸ್ ಐ ಟಿ ತನಿಖೆಯ ಕ್ರಮಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಎಸ್ ಐ ಟಿ ತನಿಖೆಗೆ ಆದೇಶಿಸಿದ್ದೇ ವಿನಾ ನನಗೆ ಇದೆಲ್ಲಾ ಗೊತ್ತಿಲ್ಲ ಎಂದು ಹೇಳುವಂತೆ, ಧರ್ಮಸ್ಥಳ ಭಕ್ತರ ಆಕ್ರೋಶ ಕಾಂಗ್ರೆಸ್‌ಗೆ ತಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳು ಸಂಭವಿಸುತ್ತಿದ್ದರೂ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮ ಭೂಷಣ ಡಾ. ವೀರೇಂದ್ರ ಹೆಗಡೆ ಮೌನ ವಹಿಸಿದ್ದಾರೆ. ಬಹುಷ ಯಾರೇ ಆದರೂ ಇಂಥ ಪರಿಸ್ಥಿತಿಯಲ್ಲಿ ಇದೇ ನಡೆಯನ್ನೇ ಅನುಸರಿಸುತ್ತಿದ್ದರು. ಕ್ಷೇತ್ರದ ಮುಖ್ಯಸ್ಥ ಯಾವುದೇ ಹೇಳಿಕೆ ನೀಡಿದರೂ ಅದು ಮತ್ತೊಂದು ಸ್ವರೂಪ ತಳೆದು ಮತ್ತೆ ಬೇರೆ ಬೆಳವಣಿಗೆ ಸಂಭವಿಸುತ್ತಿತ್ತೋ ಏನೋ. ಕೆಲ ವೊಮ್ಮೆ ಇಂಥ ಮೌನವೂ ಕೆಲವೊಂದು ಘಟನೆಗಳ ಮುಂದುವರಿಕೆಗೆ ಕಾರಣವಾಗಬಹುದು ಎಂಬ ಸತ್ಯ ಕೆಲವಾರು ವರ್ಷಗಳ ಹಿಂದೆಯೇ ಕೆಲವು ಮುಖಂಡರಿಗೆ ಅರ್ಥವಾಗಿದ್ದರೆ ಅಗ್ನಿಪರೀಕ್ಷೆ ಎದುರಿಸುವ ಸಂದರ್ಭವೇ ಬರುತ್ತಿರಲ್ಲವೇನೋ! ಧರ್ಮಸ್ಥಳ.. ಧರ್ಮ ಕ್ಷೇತ್ರ.. ನಂಬಿಕೆಯ ಕ್ಷೇತ್ರ, ಶ್ರದ್ಧೆಯ ಕ್ಷೇತ್ರ. ಏಕ ಪತ್ನಿ ವ್ರತಸ್ಥ ಶ್ರೀರಾಮನ ಸತಿ ಸೀತಾಮಾತೆಯನ್ನೇ ಬಿಡದ ಅಗ್ನಿಪರೀಕ್ಷೆ.. ಆಧುನಿಕ ದಿನಗಳಲ್ಲಿ ಧರ್ಮಸ್ಥಾನವನ್ನೂ ಬಿಟ್ಟಿಲ್ಲ.. ಸತ್ಯ ಎಲ್ಲಿಯೇ ಇರಲಿ.. ಸತ್ಯಕ್ಕೆ ಜಯವಾಗಲಿ... ಯಾವ ಮಾಧ್ಯಮದ ರೂಪದಲ್ಲಾದರೂ ಬರಲಿ.. ಅಂಥ ವದಂತಿಗಳಿಗೆ ಸೋಲಾಗಲಿ.. ಜನರ ನಂಬಿಕೆಯ ಧರ್ಮ ಗೆಲ್ಲಲಿ..

- ಅನಿಲ್ ಎಚ್.ಟಿ.