ಗೋಣಿಕೊಪ್ಪ, ಆ. ೧೬: ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ಪೊನ್ನಂಪೇಟೆ ಮತ್ತು ಪಶುವೈದ್ಯ ಆಸ್ಪತ್ರೆ ಗೋಣಿಕೊಪ್ಪಲು ಇವರುಗಳ ಜಂಟಿ ಆಶ್ರಯದಲ್ಲಿ, ಗೋಣಿಕೊಪ್ಪಲ್ಲಿನ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಸಾಕು ನಾಯಿಗಳಿಗೆ ಮತ್ತು ಸಾಕು ಬೆಕ್ಕುಗಳಿಗೆ ಉಚಿತ ರೇಬಿಸ್ ವಿರುದ್ಧದ ಲಸಿಕೆಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ನೆರೆದಿದ್ದ ರೈತರು ಮತ್ತು ಗ್ರಾಮಸ್ಥರಿಗೆ ಪ್ರಾಣಿಜನ್ಯಾ ರೋಗಗಳ ಬಗ್ಗೆ ಹಾಗೂ ರೇಬಿಸ್ ರೋಗದ ಬಗ್ಗೆ ಮಾಹಿತಿಯನ್ನು ಕೆವಿಕೆಯ ಪಶು ವಿಜ್ಞಾನದ ವಿಷಯ ತಜ್ಞರಾದ ಡಾ. ಸುರೇಶ್ ಎಸ್.ಸಿ ಅವರು ನೀಡಿದರು. ಉಚಿತ ರೇಬೀಸ್ ಲಸಿಕೆಯನ್ನು ಪೊನ್ನಂಪೇಟೆ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಗಿರೀಶ್ ಬಿಜಿ ಹಾಗೂ ಗೋಣಿಕೊಪ್ಪ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ. ಭವಿಷ್ಯ ಕುಮಾರ್ ಜಿ ಜಿ ನೀಡಿದರು.

ಕಾನೂರಿನ ಪಶು ಚಿಕಿತ್ಸಾಲಯದ ಪಶು ವೈದ್ಯಧಿಕಾರಿ ಡಾ. ಚಂದ್ರಶೇಖರ್, ಇವರು ಸಾಕು ಪ್ರಾಣಿಗಳಿಗೆ ಉಚಿತ ಜಂತು ನಿವಾರಕ ಔಷಧಿ ನೀಡಿದರು. ಶಿಬಿರದಲ್ಲಿ ಒಟ್ಟು ೯೭ ಸಾಕು ನಾಯಿ ಮತ್ತು ೧೦ ಸಾಕು ಬೆಕ್ಕುಗಳಿಗೆ ಲಸಿಕೆ ನೀಡಲಾಯಿತು.