ಮಡಿಕೇರಿ, ಆ. ೧೯: ಪ್ರಾಕೃತಿಕ ವಿಕೋಪ ಸಂಭವಿಸಿದ ಸ್ಥಳಗಳಲ್ಲಿ ಕೈಗೊಂಡಿರುವ ಮುಂಜಾಗ್ರತ ಕಾಮಗಾರಿಗಳನ್ನು ವಿಳಂಬ ಮಾಡದೆ ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ವಿಧಾನಸಭಾ ಕಲಾಪದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಒತ್ತಾಯಿಸಿದರು.
೨೦೧೮-೧೯ರಲ್ಲಿ ಕೊಡಗು ಜಿಲ್ಲೆಯ ಹಲವೆಡೆ ಭೂಕುಸಿತ ಸಂಭವಿಸಿ ಹಲವರು ತಮ್ಮ ಜೀವ, ಜೀವನವನ್ನು ಕಳೆದುಕೊಂಡಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ವಿಪತ್ತು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಿಲ್ಲ. ೩ ವರ್ಷದಲ್ಲಿ ರೂ. ೧.೮೯ ಕೋಟಿ ಮಾತ್ರ ವಿಪತ್ತು ತಡೆ ಉದ್ದೇಶಕ್ಕಾಗಿ ನೀಡಲಾಗಿದೆ. ಇದೀಗ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಶಿಫಾರಸ್ಸಿನ ಮೇಲೆ ೧೨೪ ಕಾಮಗಾರಿ ಕೈಗೊಂಡಿದ್ದು, ಯಾವ ಮಾನದಂಡದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿಲ್ಲ. ಕೊಡಗಿಗೆ ೫೦ ಕೋಟಿ ಅನುದಾನ ಒದಗಿಸುವ ಪ್ರಸ್ತಾವನೆ ಇದೆ. ಈ ಪೈಕಿ ಮಡಿಕೇರಿ ಕ್ಷೇತದಲ್ಲಿ ೮೪ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ೧೫ ಆರಂಭಗೊAಡಿದೆ ಎಂಬ ಉತ್ತರ ಸಚಿವರಿಂದ ದೊರಕಿದೆ. ೬೯ ಕಾಮಗಾರಿ ಇನ್ನೂ ಪ್ರಸ್ತಾಪಿತ ಹಂತದಲ್ಲಿದೆ. ಕೊಡಗು ಸೂಕ್ಷö್ಮ ಪ್ರದೇಶವಾಗಿರುವ ಹಿನ್ನೆಲೆ ವಿಪತ್ತು ತಡೆಗೆ ಹೆಚ್ಚಿನ ಅನುದಾನ ನೀಡಬೇಕು. ಮುಂಜಾಗ್ರತೆ ಅಗತ್ಯವಿದ್ದು, ಈ ಕಾಮಗಾರಿಯನ್ನು ಶೀಘ್ರ ಮುಕ್ತಾಯಗೊಳಿಸಬೇಕು ಎಂದು ತಿಳಿಸಿದರು.
ಮಂತರ್ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಭೂಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ದೀರ್ಘಾವಧಿ ಉಪಶಮನ ಕ್ರಮವನ್ನು ಕೈಗೊಳ್ಳಲಾಗಿದೆ. ಸಂಭವನೀಯ ಗುಡ್ಡ, ಮಣ್ಣು, ಭೂಕುಸಿತ ಜಾಗಗಳನ್ನು ಗುರುತಿಸಿ ೫೦೦ ಕೋಟಿ ವೆಚ್ಚದಲ್ಲಿ ಈ ಭಾಗದಲ್ಲಿ ಕಾಮಗಾರಿ ತೆಗೆದುಕೊಳ್ಳಲಾಗಿದೆ. ಇದರಿಂದ ಶಾಶ್ವತ ಪರಿಹಾರವಾಗುವ ಪ್ರಯತ್ನ ಆಗುತ್ತಿದೆ. ತಂತ್ರಜ್ಞರ ಸೂಚನೆ ಮೇರೆಗೆ ಈ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಅಪಾಯ ಸಾಧ್ಯತೆ ಹೆಚ್ಚಿರುವ ಕಡೆ ಈ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ ಸೂಕ್ಷö್ಮ ಪ್ರದೇಶ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಿ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಕೊಡಗಿಗೂ ರೂ. ೫೦ ಕೋಟಿ ಅನುದಾನ ಒದಗಿಸಲಾಗಿದ್ದು, ಇನ್ನೂ ಬೇಕಾದ್ದಲ್ಲಿ ಹಣ ನೀಡಲಾಗುವುದು. ಕೊಡಗಿನಲ್ಲಿ ೨೦೧೮ರಿಂದ ವಿಪತ್ತು ಸಂಭವಿಸುತ್ತಿದೆ. ಈವರೆಗೂ ದೀರ್ಘಾವದಿ ಉಪಶಮನ ಕೆಲಸ ಆಗಿಲ್ಲ. ಶಾಶ್ವತ ಯೋಜನೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಉತ್ತಮ ಫಲಿತಾಂಶದ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ೨ ತಿಂಗಳಿನಲ್ಲಿ ಪ್ರಕ್ರಿಯೆ ಮುಗಿಸುವ ಗುರಿ ಇದೆ ಎಂದು ಮಾಹಿತಿ ನೀಡಿದರು.