ಸಿದ್ದಾಪುರ, ಆ. ೨೦: ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯನ್ನು ಸ್ಥಳೀಯರ ಸಹಕಾರದಿಂದ ಪೊಲೀಸರು ರಕ್ಷಿಸಿದ್ದಾರೆ.
ಮನೆಯವರೊಂದಿಗೆ ಮನಸ್ತಾಪಗೊಂಡ ವೃದ್ಧೆ ಸಿದ್ದಾಪುರದ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ಸ್ಥಳೀಯರು ಇದನ್ನು ನೋಡಿ ೧೧೨ ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ದೌಡಾಯಿಸಿದ ಪೊಲೀಸರು ಮಹಿಳೆಯನ್ನು ರಕ್ಷಿಸಿ ವಿಚಾರಣೆ ನಡೆಸಿದಾಗ ಸುಂಟಿಕೊಪ್ಪದ ನಿವಾಸಿ ಗೌರಮ್ಮ (೮೫) ಎಂದು ತಿಳಿದು ಬಂದಿದ್ದು, ಮನೆಯವರೊಂದಿಗೆ ಮನಸ್ತಾಪಗೊಂಡು ಅಲ್ಲಿಂದ ಸಿದ್ದಾಪುರಕ್ಕೆ ಬಂದು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರು
ವುದಾಗಿ ಮಾಹಿತಿ ಲಭಿಸಿದೆ.
ಈ ಬಗ್ಗೆ ಗೌರಮ್ಮನ ಕುಟುಂಬಸ್ಥರಿಗೆ ಮಾಹಿತಿ ನೀಡಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.