ಚೆಯ್ಯಂಡಾಣೆ, ಆ. ೨೧: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಪಾಲ ಗ್ರಾಮದಲ್ಲಿ ಕಾಡಾನೆ ತೋಟಗಳಿಗೆ ಲಗ್ಗೆಯಿಟ್ಟು ಫಸಲು ನಾಶಗೊಳಿಸಿದೆ.

ಗ್ರಾಮದ ಎರಟೆಂಡ ಮೊಹಮ್ಮದ್, ಹನೀಫಾ, ಸಂಶುದ್ದೀನ್, ಹಸ್ಸನ್, ಪಾಲಚಂಡ ಪೂವಿ ಹಾಗೂ ಮತ್ತಿತರ ಬೆಳಗಾರರ ತೋಟಗಳಲ್ಲಿ ದಾಳಿ ನಡೆಸಿದ ಕಾಡಾನೆಗಳು ಕಾಫಿ ಬಾಳೆ, ಅಡಿಕೆ, ತೆಂಗಿನ ಗಿಡಗಳನ್ನು ಅಪಾರ ಪ್ರಮಾಣದಲ್ಲಿ ಹಾನಿಪಡಿಸಿ ನಷ್ಟ ಉಂಟುಮಾಡಿದೆ. ಗ್ರಾಮದ ಬೆಳೆಗಾರ ಎರಟೆಂಡ ಮೊಹಮ್ಮದ್ ‘ಶಕ್ತಿ’ಯೊಂದಿಗೆ ಮಾತನಾಡಿ, ಈ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ಜನರು ಭಯ ಭೀತರಾಗಿದ್ದಾರೆ. ಕಾರ್ಮಿಕರು ತೋಟಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲೆಗೆ ತೆರಳಲು ಭಯದ ವಾತಾವರಣ ಸೃಷ್ಟಿಯಾಗಿದೆ. ಕಾಡಾನೆಗಳು ತೋಟಗಳಿಗೆ ನುಸುಳದ ರೀತಿಯಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನಷ್ಟ ಹೊಂದಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.