ನಂಜರಾಯಪಟ್ಟಣ, ಆ. ೨೩: ಶಾಲಾ ಮೈದಾನದಲ್ಲಿ ಡಿಸ್ಕಸ್ ಥ್ರೋ ವೇಳೆ ವಿದ್ಯಾರ್ಥಿಯೋರ್ವ ಗಾಯಗೊಂಡ ಘಟನೆ ನಂಜರಾಯಪಟ್ಟಣ ಪ್ರೌಢಶಾಲೆಯಲ್ಲಿ ನಡೆದಿದೆ.
ಶಾಲೆಯ ಹತ್ತನೆಯ ತರಗತಿಯ ಬಬಿತಾ ಎಂಬ ವಿದ್ಯಾರ್ಥಿನಿ ಅಂತರಶಾಲಾ ಕ್ರೀಡಾಕೂಟದಲ್ಲಿ ಶಾಲೆಯಿಂದ ಭಾಗವಹಿಸಲು ಶಾಲಾ ಮೈದಾನದಲ್ಲಿ ಅಭ್ಯಾಸದಲ್ಲಿ ನಿರತಳಾಗಿದ್ದ ಸಂದರ್ಭ ಮೈದಾನದ ಮತ್ತೊಂದು ಬದಿಯಲ್ಲಿ ಸಹಪಾಠಿಗಳೊಂದಿಗೆ ಆಟೋಟದಲ್ಲಿ ನಿರತನಾಗಿದ್ದ ಎಂಟನೆ ತರಗತಿಯ ಪ್ರಜ್ವಲ್, ವಿದ್ಯಾರ್ಥಿನಿ ಬಬಿತಾ ಡಿಸ್ಕಸ್ ಥ್ರೋ ಎಸೆಯುವ ವೇಳೆ ಸ್ಥಳಕ್ಕೆ ಬಂದಾಗ ಆತನ ಎಡ ಕಿವಿಗೆ ಪೆಟ್ಟು ಬಿದ್ದು ಗಾಯಗೊಂಡಿದ್ದಾನೆ.
ತಕ್ಷಣವೇ ಎಚ್ಚೆತ್ತುಕೊಂಡ ಶಾಲಾ ಶಿಕ್ಷಕರು ತಮ್ಮದೇ ಕಾರಿನಲ್ಲಿ ಕುಶಾಲನಗರದ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ಒಳಪಡಿಸಿದಾಗ ಅಲ್ಲಿನ ವೈದ್ಯರು ಮಡಿಕೇರಿಯ ನರ ತಜ್ಞರ ಬಳಿಗೆ ಕಳುಹಿಸಿದ್ದಾರೆ.
ಬಳಿಕ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಪ್ರಜ್ವಲ್ನನ್ನು ಕರೆತಂದ ಶಿಕ್ಷಕ ಸಮೂಹ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಶ್ರೀನಿವಾಸ ಎಂಬ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಶಸ್ತç ಚಿಕಿತ್ಸೆ ಬಳಿಕ ವಿದ್ಯಾರ್ಥಿ ಕ್ಷೇಮವಾಗಿದ್ದಾನೆ ಎಂದು ಶಿಕ್ಷಕರು ತಿಳಿಸಿದ್ದಾರೆ.
ಶಾಲಾ ಮೈದಾನದಲ್ಲಿ ಜರುಗಿದ ಆಕಸ್ಮಿಕ ಘಟನೆಯಿಂದ ಗಾಯಗೊಂಡ ವಿದ್ಯಾರ್ಥಿಯ ಚಿಕಿತ್ಸೆಗೆ ಶಾಲೆಯ ಏಳು ಮಂದಿ ಶಿಕ್ಷಕರು ಹಣ ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗಾಯಾಳು ವಿದ್ಯಾರ್ಥಿ ಪ್ರಜ್ವಲ್ ಪೋಷಕರು ಕೂಲಿ ಕಾರ್ಮಿಕರಾದ್ದರಿಂದ ಅವರಿಗೆ ಆರ್ಥಿಕ ಹೊರೆಯಾಗದಂತೆ ಶಿಕ್ಷಕರೇ ನೆರವಾಗಿದ್ದು, ಪ್ರಜ್ವಲ್ನ ವೈದ್ಯಕೀಯ ವೆಚ್ಚಕ್ಕೆ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಶೇ.೨೫ರ ಅನುದಾನದಡಿ ಅಗತ್ಯ ಹಣಕಾಸು ನೆರವು ನೀಡಲು ನಿರ್ಣಯಿಸಿರುವ ಬಗ್ಗೆ ಪಂಚಾಯಿತಿ ಅಧ್ಯಕ್ಷ ಚೆಟ್ಟಡ್ಕ ವಿಶ್ವ ಹಾಗೂ ಸದಸ್ಯ ಮಾವಾಜಿ ರಕ್ಷಿತ್ ತಿಳಿಸಿದ್ದಾರೆ.