ಸುಂಟಿಕೊಪ್ಪ, ಆ. ೨೩: ಸುಂಟಿಕೊಪ್ಪ ಪಟ್ಟಣದಲ್ಲಿ ಈಗ ಪೊಲೀಸರಿಗೆ ಸಹಕಾರಿಯಾಗುವಂತೆ ಸಂಚಾರಿ ನಿಯಮ ಉಲ್ಲಂಘಿಸುವವರ ಮೇಲೆ ಹದ್ದಿನ ಕಣ್ಣು ಇಡಲು ಕ್ಯಾಮರಾ ಕಣ್ಣು ಕಾರ್ಯಾರಂಭ ಮಾಡಿದೆ.
ಸುಂಟಿಕೊಪ್ಪ ನಗರದ ಹೃದಯ ಭಾಗವಾಗಿರುವ ಕನ್ನಡ ವೃತ್ತದ ಸಮೀಪದಲ್ಲಿ ಅಂದಾಜು ರೂ. ೧.೮೦ ಲಕ್ಷ ವೆಚ್ಚದಲ್ಲಿ ಅತ್ಯುತ್ತಮ ತಂತ್ರಜ್ಞಾನ ಆಧಾರಿತ ಕ್ಯಾಮರಾವನ್ನು ಅಳವಡಿಸಲಾಗಿದ್ದು, ಇದು ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ನಿಗಾ ಇಡಲಿದೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವುದು ಆತ್ಯುತ್ತಮ ತಂತ್ರಜ್ಞಾನ ಆಧಾರಿತ ಕ್ಯಾಮರಾದಲ್ಲಿ ಸೆರೆ ಆದಲ್ಲಿ ಜುಲ್ಮಾನೆಯ ಚಲನ್ ವಾಹನದ ಮಾಲೀಕರಿಗೆ ರವಾನೆ ಆಗಲಿದೆ.
ಇನ್ನು ಮುಂದೆ ಪೊಲೀಸರು ಇರಲಿ ಇಲ್ಲದಿರಲ್ಲಿ ಯಾರೇ ಆದರೂ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಕೆಲವೇ ಕ್ಷಣಗಳಲ್ಲಿ ಮೊಬೈಲ್ಗೆ ಸಂದೇಶ ಮತ್ತು ದಂಡದ ಮೊತ್ತ ಬರಲಿದೆ.
ಇದರಿಂದಾಗಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಕಾರು ಮತ್ತು ಇತರ ದೊಡ್ಡ ವಾಹನಗಳಲ್ಲಿ ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡುವುದು, ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸುವುದು, ಓವರ್ ಸ್ಪೀಡ್, ತ್ರಿಬ್ಬಲ್ ರೈಡಿಂಗ್, ಅಡ್ಡಾದಿಡ್ಡಿ ಪಾರ್ಕಿಂಗ್ ಇತ್ಯಾದಿ ರೀತಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಬ್ರೇಕ್ ಬಿಳಲಿದೆ.ಹೀಗಾಗಿ ಕಡ್ಡಾಯವಾಗಿ ವಾಹನ ಸವಾರರು ಸಂಚಾರ ನಿಯಮವನ್ನು ಪಾಲಿಸುವಂತೆ ಸುಂಟಿಕೊಪ್ಪ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
ಈ ಕ್ಯಾಮರಾ ಅಳವಡಿಸುವ ಸಂದರ್ಭ ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್ ಮೇಲ್ವಿಚಾರಣೆ ನಡೆಸಿದರು. ಇದಕ್ಕೆ ಪೊಲೀಸ್ ಸಿಬ್ಬಂದಿಗಳು ಸಹಕಾರ ನೀಡಿದರು.