ಸಿದ್ದಾಪುರ, ಆ. ೨೪: ವೀರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಅಂತಾರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯ ಸಂಪರ್ಕದ ಸಿದ್ದಾಪುರ ಮುಖ್ಯ ರಸ್ತೆ ೯ ತಿಂಗಳು ಕಳೆದರೂ ಕಾಮಗಾರಿ ಪೂರ್ಣವಾಗದೆ ಸಂಕಷ್ಟದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಏಳು ದಿನದಲ್ಲಿ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಪ್ರತಿಭಟನೆ ಹೋರಾಟ ನಡೆಸಬೇಕಾಗುತ್ತದೆ ಎಂದು ಅಂಬೇಡ್ಕರ್ ಸೇನೆ ಹಾಗೂ ವಾಹನ ಚಾಲಕರ ಸಂಘ ಎಚ್ಚರಿಸಿದೆ.

ರಸ್ತೆ ಅಭಿವೃದ್ಧಿಗಾಗಿ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ನವೆಂಬರ್ ತಿಂಗಳಲ್ಲಿ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದ್ದರು ಇದೀಗ ೯ ತಿಂಗಳು ಕಳೆದರೂ ಗುತ್ತಿಗೆದಾರರ ನಿರ್ಲಕ್ಷö್ಯದಿಂದ ರಸ್ತೆ ಕಾಮಗಾರಿ ವಿಳಂಬವಾಗಿದೆ ಎಂದು ಸ್ಥಳೀಯರು ಆರೋಪಿಸಿದರು.

ಪಾಲಿಬೆಟ್ಟ ರಸ್ತೆಯಿಂದ ಅಯ್ಯಪ್ಪ ದೇವಸ್ಥಾನದವರೆಗೆ ಪಟ್ಟಣದ ಎರಡೂ ಬದಿ ಚರಂಡಿ ಮಾಡಲಾಗುತ್ತಿದ್ದು, ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿAದ ಆವೃತ್ತವಾಗಿ ಸಾರ್ವಜನಿಕರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಸೇತುವೆ ನಿರ್ಮಾಣಕ್ಕೆಂದು ಭಾರೀ ಗಾತ್ರದ ಗುಂಡಿ ತೆಗೆಯಲಾಗಿದ್ದು ಪೈಪು ಅಳವಡಿಸದೆ ಹಾಗೆ ಬಿಡಲಾಗಿದೆ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೂ ಸಮಸ್ಯೆ ಆಗುತ್ತಿದ್ದು ಅಪಘಾತಕ್ಕೆ ಕಾರಣವಾಗುತ್ತಿದೆ.

ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಸತೀಶ್ ಅಸಮಾಧಾನ ವ್ಯಕ್ತಪಡಿಸಿ ಕಾಮಗಾರಿ ಪ್ರಾರಂಭಿಸಿ ಪೂರ್ಣಗೊಳಿಸದಿದ್ದಲ್ಲಿ ವಾಹನ ಚಾಲಕರು ಹಾಗೂ ವಿವಿಧ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭ ವಾಹನ ಚಾಲಕರ ಸಂಘದ ಅಧ್ಯಕ್ಷ ಸೂದನ ಸತೀಶ್, ಆಟೋ ಚಾಲಕರು ಸ್ಥಳೀಯರು ಹಾಜರಿದ್ದರು.