ಸಿದ್ದಾಪುರ, ಆ. ೨೪: ಗೌರಿ ಗಣೇಶ ಉತ್ಸವವನ್ನು ಕಾನೂನು ಪಾಲನೆ ಮಾಡುವುದರೊಂದಿಗೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಸಾಮರಸ್ಯದಿಂದ ಹಬ್ಬವಾಗಿ ಆಚರಿಸಬೇಕೆಂದು ಮಡಿಕೇರಿ ವಿಭಾಗದ ಡಿ.ವೈ.ಎಸ್ಪಿ. ಸೂರಜ್ ತಿಳಿಸಿದರು.

ಸಿದ್ದಾಪುರದ ಸೆಂಟನರಿ ಸಭಾಂಗಣದಲ್ಲಿ ಗೌರಿ ಗಣೇಶ ಉತ್ಸವ ಸಮಿತಿಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಯಾವುದೇ ಕಾರಣಕ್ಕೂ ಉತ್ಸವ ಸಮಿತಿಯವರು ಡಿ.ಜೆ.ಗಳನ್ನು ಬಳಸುವಂತಿಲ್ಲ ಎಂದರು. ಕಾನೂನು ಉಲ್ಲಂಘನೆ ಮಾಡದಂತೆ ಮನವಿ ಮಾಡಿದರು. ಕಾನೂನು ಉಲ್ಲಂಘನೆ ಮಾಡಿದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಡಿವೈಎಸ್ಪಿ ಎಚ್ಚರಿಕೆ ನೀಡಿದರು.

ಪೊಲೀಸ್ ಇಲಾಖೆಯಿಂದ ನೀಡಿರುವ ಸಮಯದೊಳಗೆ ಗೌರಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕೆಂದು ತಿಳಿಸಿದರು. ಇಲಾಖೆಯಿಂದ ನೀಡಿರುವ ಷರುತ್ತುಗಳನ್ನ ಕಡ್ಡಾಯವಾಗಿ ಪಾಲಿಸುವಂತೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಡಿಕೇರಿ ವಿಭಾಗದ ಸಿ.ಐ. ರಾಜು ಮತ್ತು ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಹಾಯಕ ಠಾಣಾಧಿಕಾರಿಗಳು ಮತ್ತು ವಿವಿಧ ಗೌರಿ ಗಣೇಶ ಉತ್ಸವ ಸಮಿತಿಗಳ ಪದಾಧಿಕಾರಿಗಳು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಶಾಂತಿ ಸಭೆಯು ಕೂಡ ನಡೆಸಲಾಯಿತು. ಮುಂಬರುವ ದಿನಗಳಲ್ಲಿ ಮುಸ್ಲಿಂ ಬಾಂಧವರ ಹಬ್ಬವನ್ನು ಕೂಡ ಶಾಂತಿ ಸೌಹಾರ್ದತೆಯಿಂದ ಆಚರಿಸುವಂತೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದರು.