ಮಡಿಕೇರಿ,ಆ.೨೬; ಜನಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಪ್ರಯೋಜನವನ್ನು ಪಡೆಯುವಂತೆ ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯಕ್ ಸಲಹೆ ನೀಡಿದರು.
ಕೊಡಗು ಜಿಲ್ಲಾ ಲೀಡ್ ಬ್ಯಾಂಕ್, ಕೆನರಾ ಬ್ಯಾಂಕ್ ಮಾದಾಪುರ, ಕೆಡಿಸಿಸಿ ಬ್ಯಾಂಕ್ ಸಹಯೋಗದೊಂದಿಗೆ ಸೋಮವಾರಪೇಟೆ ತಾಲೂಕಿನ ಮಾದಾಪುರದ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಸಭಾಂಗಣದಲ್ಲಿ ಮಾದಾಪುರ ಗ್ರಾಮ ಪಂಚಾಯಿತಿ ವತಿಯಿಂದ ಕೇಂದ್ರ ಸರ್ಕಾರದ ಆದೇಶದಂತೆ ನಡೆದÀ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಯೋಜನೆಗಳಲ್ಲಿ ಒಂದಾದ ಸುರಕ್ಷಾ ಭೀಮಾ ಯೋಜನೆ ಅಪಘಾತ ವಿಮೆಯಾಗಿದ್ದು ವಾರ್ಷಿಕ ರೂ. ೨೦ ಪಾವತಿಸಿ ಯೋಜನೆ ಮಾಡಿಕೊಳ್ಳುವುದು. ವಾರ್ಷಿಕವಾಗಿ ೪೩೬ಗಳನ್ನು ಪಾವತಿಸಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮೆಯನ್ನು ಮಾಡಿಸಿಕೊಂಡು ಯಾವುದೇ ರೀತಿಯಲ್ಲಿ ಮರಣ ಹೊಂದಿದರೆ ಅಂತವರ ನಾಮಿನಿಗೆ ಕೂಡ ಎರಡು ಲಕ್ಷ ರೂಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಪಿಂಚಣಿ ರೂಪದಲ್ಲಿ ೧೦೦೦ ಗಳಿಂದ ೫೦೦೦ ವರೆಗಿನ ಪಿಂಚಣಿ ಹಣ ಗಳಿಸಬೇಕಾದರೆ ೧೮ ರಿಂದ ೪೦ ವರ್ಷ ಒಳಗಿನವರು ಪಿಂಚಣಿ ಮಾಡಿಸಿಕೊಳ್ಳಬಹುದಾಗಿದೆ. ಕೆ ವೈ ಸಿ ನೀಡುವ ಸಂದರ್ಭ ಎಚ್ಚರ ವಹಿಸಬೇಕು, ಸೈಬರ್ ಕ್ರೈಂಗೆ ಒಳಗಾಗಬಾರದು, ತಮ್ಮ ಹಣಕ್ಕೆ ತಾವೇ ಜವಾಬ್ದಾರಿಯಾಗಿರಬೇಕೆಂದು ಎಚ್ಚರಿಕೆ ನೀಡಿದರು.
ಅತಿಥಿಗಳಾಗಿದ್ದ ಕೆನರಾ ಬ್ಯಾಂಕ್ ವಲಯ ವ್ಯವಸ್ಥಾಪಕ ರಾಜೇಶ್ ಕುಮಾರ್ ಮಾತನಾಡಿ, ಬ್ಯಾಂಕ್ ಹಾಗೂ ಸರಕಾರದಿಂದ ದೊರಕುವ ಎಲ್ಲಾ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಣ್ಣ ಸಾಮಾಜಿಕ ಭದ್ರತೆಯಡಿ ಲಭ್ಯವಿರುವ ಯೋಜನೆಗಳನ್ನು ಮಾಡಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರು ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಮಮತಾ ಜೋಷಿ ಉದ್ಘಾಟಿಸಿದರು. ಆರ್ಥಿಕ ಸಮಾಲೋಚಕಿ ಶ್ಯಾಮಲ ಪ್ರಾರ್ಥಿಸಿದರೆ, ಮಾದಾಪುರ ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಕವನ ಸ್ವಾಗತಿಸಿದರು. ಚೆನ್ನಮ್ಮ ಕಾಲೇಜು ಉಪನ್ಯಾಸಕಿ ಪ್ರಮಿಳಾ ನಿರೂಪಿಸಿದರೆ, ಕೆಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕಿ ಶಶಿಕಲಾ ವಂದಿಸಿದರು.