ಮಡಿಕೇರಿ, ಆ. ೨೯: ಭದ್ರತೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡುವದರೊಂದಿಗೆ ಮಡಿಕೇರಿ ದಸರಾ- ಜನೋತ್ಸವ ಆಚರಿಸುವಂತೆ ದಸರಾ ಸಮಿತಿ ಪೋಷಕರೂ ಆಗಿರುವ ಶಾಸಕ ಡಾ.ಮಂತರ್ ಗೌಡ ದಸರಾ ಹಾಗೂ ದಶಮಂಟಪ ಸಮಿತಿ ಪ್ರಮುಖರಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕರು ; ಕಳೆದ ಬಾರಿ ರೂ.೧೫೦ ಕೋಟಿ ವೆಚ್ಚದಲ್ಲಿ ದಸರಾ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಗಿದೆ. ಈ ಬಾರಿ ಹೆಚ್ಚಿನ ಅನುದಾನಕ್ಕಾಗಿ ಮುಖ್ಯ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರುಗಳೊಂದಿಗೆ ಮಾತನಾಡಿ ಹೆಚ್ಚಿನ ಅನುದಾನ ಕೊಡಿಸೋಣ. ಆದರೆ ; ಯಾರು ಕೂಡ ಹೆಚ್ಚಿನ ಬಜೆಟ್ ಹಾಕಿಕೊಳ್ಳಬೇಡಿ, ಸರಕಾರ ಅನುದಾನ ಎಷ್ಟಿರುತ್ತದೆ ಎಂಬದು ಈಗಲೇ ಗೊತ್ತಾಗುವದಿಲ್ಲ. ಹಾಗಾಗಿ ಅರ್ಥಪೂರ್ಣ ಆಚರಣೆಗೆ ಬೇಕಾಗುವಷ್ಟು ಖರ್ಚು ಮಾಡಿ. ಉತ್ಸವದಲ್ಲಿ ಭದ್ರತೆ ಹಾಗೂ ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಹೇಳಿದರು.

ಪ್ರತಿ ಮಂಟಪದಲ್ಲಿ ಪೊಲೀಸರನ್ನು ನಿಯೋಜಿಸಬೇಕು. ಕರಗ ಹಾಗೂ ದಶಮಂಟಪಗಳು ಸಾಗುವ ಮಾರ್ಗದ ಗುಂಡಿ ಮುಚ್ಚುವ ಕಾರ್ಯವಾಗಬೇಕು. ವಿದ್ಯುತ್ ಮಾರ್ಗ ಸರಿಪಡಿಸುವುದು ಹಾಗೂ ಬೀಳುವ ಮರಗಳಿದ್ದಲ್ಲಿ ತೆರವುಗೊಳಿಸುವುದು ಮತ್ತಿತರ ಸಂಬAಧ ಅರಣ್ಯ ಮತ್ತು ಸೆಸ್ಕ್ ಇಲಾಖೆಯವರು ಅಗತ್ಯ ಕ್ರಮಕೈಗೊಳ್ಳುವಂತೆ ಶಾಸಕರು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮತ್ತೊಂದು ಸಭೆ ನಡೆಸಲಾಗುವುದು.

ಮಡಿಕೇರಿ ದಸರಾವು ವಿಶಿಷ್ಟ ಹಾಗೂ ವಿಭಿನ್ನವಾಗಿದ್ದು, ಜನರ ಸುರಕ್ಷತೆ, ವಾಹನ ನಿಲುಗಡೆ ಮತ್ತಿತರ ಸಂಬAಧ ಅಗತ್ಯ ಕ್ರಮಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಶಾಸಕರು ಕೋರಿದರು.