ವೀರಾಜಪೇಟೆ, ಸೆ. ೫: ಸಂಗೀತ ಕಲಿಕೆ ಹಾಗೂ ಆಸಕ್ತಿಯಿಂದ ಮಕ್ಕಳು ಸೂಕ್ಷö್ಮ ಸಂವೇದನಾಶೀಲರಾಗಲು ಸಾಧ್ಯದೊಂದಿಗೆ ಸಕಾರಾತ್ಮಕ ಬದಲಾವಣೆ ತರುವ ಶಕ್ತಿ ಸಂಗೀತಕ್ಕಿದೆ ಎಂದು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಿಸಿದರು.
ಪಟ್ಟಣದ ಬಸವೇಶ್ವರ ದೇವಾಲಯದ ಆವರಣದಲ್ಲಿ ಬಸವೇಶ್ವರ ದೇವಾಲಯದ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ದಿ. ಎಂ. ವೆಂಕಟೇಶ್ ಕಾಮತ್ ಟ್ರಸ್ಟ್ ನೇತೃತ್ವದಲ್ಲಿ ವಾಯ್ಸ್ ಆಫ್ ವೀರಾಜಪೇಟೆ ಸಂಗೀತ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಬಾಲ್ಯದಲ್ಲಿ ಮಕ್ಕಳಿಗೆ ಒಳ್ಳೆಯ ಹಾಡು, ಸಂಸ್ಕೃತಿ ಕಲಿಸುವುದರಿಂದ ಮನಸ್ಸು ಪರಿವರ್ತನೆಗೊಳ್ಳುತ್ತದೆ.
ವೆಂಕಟೇಶ್ ಕಾಮತ್ ಅವರು ಅರ್ಥಪೂರ್ಣ ಬದುಕು ಸಾಗಿಸಿದ್ದರು. ಅವರು ರಾಜ್ಯದಲ್ಲಿಯೇ ಅತ್ಯುನ್ನತ ದಸ್ತಾವೇಜು ಬರಹಗಾರರಾಗಿ ಖ್ಯಾತಿ ಪಡೆದಿದ್ದರು. ಅವರಿಗೆ ಕನ್ನಡ ಸಾಹಿತ್ಯದ ಕುರಿತು ಅಪಾರ ಆಸಕ್ತಿ ಮತ್ತು ಒಲವು ಹೊಂದಿದ್ದರು. ರಾಮಾಯಣ ಮತ್ತು ಮಹಾಭಾರತವನ್ನು ತಮ್ಮ ಮಾತಿನಲ್ಲಿ ವಿವರಿಸುತ್ತಿದ್ದ ಅವರ ಪಾಂಡಿತ್ಯ ಗಮನಾರ್ಹ ಎಂದು ಶ್ಲಾಘಿಸಿದರು. ೧೯೬೦ರ ಆಸುಪಾಸಿನಲ್ಲಿ ವೀರಾಜಪೇಟೆ, ಶ್ರೀಮಂಗಲ, ಕುಟ್ಟ ಭಾಗದಲ್ಲಿ ಹುಲಿ ಕಾಟದಿಂದ ಹಲವಾರು ಜನರು ಜೀವ ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಒಂದು ತಂಡ ರಚನೆ ಮಾಡಲಾಗಿತ್ತು. ಸ್ಕೌಟ್-ಗೈಡ್ಸ್ನಲ್ಲಿದ್ದ ವೆಂಕಟೇಶ್ ಕಾಮತ್ ಅವರು ಹುಲಿ ಹಾವಳಿ ತಡೆಗೆ ಸಹಕರಿಸಿದ್ದರು. ಈ ವಿಚಾರ ಮೈಸೂರು ಮಹಾರಾಜರಿಗೂ ಮುಟ್ಟಿತ್ತು. ಆ ಸಂದರ್ಭದಲ್ಲಿ ಚಾಮರಾಜ ಒಡೆಯರ್ ಇವರನ್ನು ದಸರಾ ಸಂದರ್ಭದ ದರ್ಬಾರ್‌ಗೆ ಆಹ್ವಾನ ಕೊಟ್ಟು ಇವರಿಗೆ ಗೌರವ ಸೂಚಿಸಿದ್ದನ್ನು ಸ್ಮರಿಸಿದರು.
ಅತ್ಯಂತ ಪ್ರಭಾವಿ ವ್ಯಕ್ತಿ ಇವರಾಗಿದ್ದರು ಕೂಡ ರಾಜಕೀಯಕ್ಕೆ ಬೆಳೆಯಲು ಇದನ್ನು ಬಂಡವಾಳ ಮಾಡಿಕೊಳ್ಳಲಿಲ್ಲ. ನಿಸ್ವಾರ್ಥ ಸೇವೆಯನ್ನ ಸಲ್ಲಿಸಿದಂತಹ ವ್ಯಕ್ತಿ ಇವರಾಗಿದ್ದು ಇಂತವರನ್ನು ಸರಕಾರ ಗುರುತಿಸದೆ ಇರುವುದು ನಿಜಕ್ಕೂ ಬೇಸರದ ವಿಷಯ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ತುಳಸಿ ಫಾರ್ಮ್ನ ಮಣಿಕಾರ್ ಲಕ್ಷಿ÷್ಮ ನಾರಾಯಣ ಶಾನ್‌ಬೋಗ್ ಮಾತನಾಡಿ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ತೀರ್ಪುಗಾರರಾಗಿ ಆಗಮಿಸಿದ್ದ ವಕೀಲರಾದ ಪ್ರಶಾಂತ್ ಬಾಳಿಗಾ ಮಾತನಾಡಿದರು.
ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರನಾಥ್ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಯ್ಸ್ ಆಫ್ ವೀರಾಜಪೇಟೆ ಕಾರ್ಯಕ್ರಮವನ್ನು ಕಳೆದ ೧೫ ವರ್ಷಗಳಿಂದ ದಿ. ವೆಂಕಟೇಶ್ ಕಾಮತ್ ಜ್ಞಾಪಕಾರ್ಥವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಸ್ಥಳೀಯ ಕಲಾವಿದರಿಗೆ, ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಗೌರಿ ಗಣೇಶೋತ್ಸವ ಹಬ್ಬದ ಸಂದರ್ಭದಲ್ಲಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು
ವೇದಿಕೆಯಲ್ಲಿ ಉತ್ಸವ ಸಮಿತಿ ಪದಾಧಿಕಾರಿ ಪುಷ್ಪರಾಜ್ ಜೈನ್ ಉಪಸ್ಥಿತರಿದ್ದರು.