ಕಡಂಗ, ಸೆ. ೬: ತಾಜುಲ್ ಉಲಮಾ ಬದ್ರಿಯಾ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಅಂಗವಾಗಿ ಸಂದೇಶ ಜಾಥಾವನ್ನು ಗುರುವಾರ ಬೆಳಿಗ್ಗೆ ಬದ್ರಿಯಾ ಮಸೀದಿಯಿಂದ ಕಡಂಗ ಪಟ್ಟಣದ ಮೂಲಕ ಕೊಕ್ಕಂಡ ಬಾಣೆ ದರ್ಗಾದವರೆಗೆ ೨ ಸಂದೇಶ ಜಾಥಾವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮೊದಲು ಮಸೀದಿ ಆವರಣದಲ್ಲಿ ಜಮಾಅತ್ ಅಧ್ಯಕ್ಷ ಉಸ್ಮಾನ್ ಕೆ.ಇ. ಮತ್ತು ಹಿರಿಯರ ಸಮ್ಮುಖದಲ್ಲಿ ಧ್ವಜಾರೋಹಣ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾರ್ಥನೆಯನ್ನು ಮದರಸ ಪ್ರಾಂಶುಪಾಲ ಹುಸೈನ್ ಸಹದಿ ನೆರವೇರಿಸಿದರು.

ಸಂದೇಶ ಜಾಥಾದಲ್ಲಿ ೨ ಕುದುರೆಗಳ ಸವಾರಿ ಹಾಗೂ ವಿದ್ಯಾರ್ಥಿಗಳ ಆಕರ್ಷಕ ದಫ್ ಮತ್ತು ಸ್ಕೌಟ್ ನೋಡುಗರ ಗಮನಸೆಳೆದವು. ಮುಖ್ಯ ರಸ್ತೆಯಲ್ಲಿ ಮುಹ್ಯದ್ದೀನ್ ಮಸೀದಿ ವತಿಯಿಂದ ಹಾಗೂ ಊರಿನ ಮಹಿಳೆಯರಿಂದ ಪಾನಿಯವನ್ನು ನೀಡಲಾಯಿತು. ಈದ್ ಮಿಲಾದ್ ಜಾಥಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡರು.

ಕಾರ್ಯಕ್ರಮದ ನಿರೂಪಣೆಯನ್ನು ಜಮಾಅತ್ ಕಾರ್ಯದರ್ಶಿ ರಾಶೀದ್ ಯು.ಇ. ನಿರ್ವಹಿಸಿದರು. ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಸಿಬ್ಬಂದಿಗಳ ಬಂದೋಬಸ್ತ್ ನಲ್ಲಿ ಕಾರ್ಯಕ್ರಮ ನಡೆಸಲಾಯಿತು.