ಸೋಮವಾರಪೇಟೆ, ಸೆ. ೬: ತಾಲೂಕಿನ ಗರ್ವಾಲೆ ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಕ್ರೀಡಾ ಸಮಿತಿ ವತಿಯಿಂದ ಗ್ರಾಮದ ಮೈದಾನದಲ್ಲಿ ಕೈಲ್ ಪೊಳ್ದ್ ಹಬ್ಬದ ಪ್ರಯುಕ್ತ ವಿವಿಧ ಕ್ರೀಡಾಸ್ಪರ್ಧೆಗಳು ನಡೆದವು.

ಗ್ರಾಮದ ಕೊತ್ತನಮೊಟ್ಟೆ ಆಟೋಟ ಮೈದಾನದಲ್ಲಿ ಆಯೋಜಿ ಸಿದ್ದ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಗ್ರಾಮಸ್ಥರು ಹಾಗೂ ಸಮುದಾಯ ಬಾಂಧವರು ಸಂಭ್ರಮ ಸಡಗರದಿಂದ ಪಾಲ್ಗೊಂಡಿದ್ದರು. ಹಬ್ಬದ ವಿಶೇಷವಾಗಿ ಹಂಬು ಹೊಡೆಯುವ ಕಾರ್ಯದಲ್ಲಿ ಪೊನ್ನಪ್ಪ, ಬೋಜಣ್ಣ ಪೂಜೆ ನೆರವೇರಿಸಿದರು. ಕ್ರೀಡಾ ಸ್ಪರ್ಧೆಯಲ್ಲಿ ಹಗ್ಗ ಜಗ್ಗಾಟ, ಗುಡ್ಡಗಾಡು ಓಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಮ್ಯಾರಥಾನ್, ಗೂಟಕ್ಕೆ ರಿಂಗ್ ಹಾಕುವುದು ಸೇರಿದಂತೆ ಇತರ ಸ್ಪರ್ಧೆಗಳು ನಡೆದವು. ಹಗ್ಗಜಗ್ಗಾಟ ದಲ್ಲಿ ಗೀಜಿಗಂಡ ತಂಡ ಪ್ರಥಮ ಬಹುಮಾನ ಪಡೆಯಿತು. ಪೆಮ್ಮಯ್ಯ ತಂಡ ದ್ವಿತೀಯ ಸ್ಥಾನ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪಾಸುರ ಮನು (ಪ್ರ), ಬಾಚಳ್ಳಿರ ಪೆಮ್ಮಯ್ಯ (ದ್ವಿ) ಬಹುಮಾನ ಪಡೆದರು. ಶಾಟ್‌ಫುಟ್‌ನಲ್ಲಿ ಗೀಜಿಗಂಡ ಚೇತನ್ (ಪ್ರ), ಗೀಜಿಗಂಡ ವನ (ದ್ವಿ) ಹಾಗೂ ಗೀಜಿಗಂಡ ಲೋಕೇಶ್ (ತೃ) ಸ್ಥಾನ ಗಳಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಕ್ರೀಡಾ ಸಮಿತಿಯ ಅಧ್ಯಕ್ಷ ಆರುಢ ಅಪ್ಪಚ್ಚು ವಹಿಸಿದ್ದರು. ಉಪಾಧ್ಯಕ್ಷ ಪಾಸುರ ಮನು, ಪದಾಧಿಕಾರಿಗಳಾದ ಗೀಜಿಗಂಡ ಲೋಕೇಶ್, ತಾಚಮಂಡ ಈರಪ್ಪ, ಪೆಮ್ಮಯ್ಯ, ಸೋಮಯ್ಯ ಇದ್ದರು.