ಸುಂಟಿಕೊಪ್ಪ, ಸೆ. ೬: ಜನಸಾಮಾನ್ಯರು ಕೇಂದ್ರ ಸರಕಾರದ ಜನ ಸುರಕ್ಷಾ ಯೋಜನೆಗಳ ಗರಿಷ್ಠ ಪ್ರಯೋಜನಗಳನ್ನು ಪಡೆದು ಕೊಳ್ಳುವಂತೆ ಸುಂಟಿಕೊಪ್ಪ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಅನಿಕೇತ್ ಕರೆ ನೀಡಿದರು. ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ಸಹಯೋಗದೊಂದಿಗೆ ಸುಂಟಿಕೊಪ್ಪ ಗ್ರಾಮದಲ್ಲಿ ಜನ ಸುರಕ್ಷಾ ಅಭಿಯಾನ ಗ್ರಾ.ಪಂ. ಕಾರ್ಯಾಲಯದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅನಿಕೇತ್ ಅವರು, ಜನ ಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸಿಕೊಳ್ಳಬೇಕು. ಇದರಿಂದ ಹೆಚ್ಚಿನ ಪ್ರಯೋಜನ ಆಗುತ್ತದೆ. ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯು ಅಪಘಾತ ವಿಮೆ ಯಾಗಿದ್ದು, ವಾರ್ಷಿಕ ರೂ. ೨೦ ಪಾವತಿಸಿ ಈ ಯೋಜನೆ ಮಾಡಿಸಿ ಕೊಳ್ಳಬಹುದು. ೨ ಲಕ್ಷ ತನಕದ ವಿಮಾ ಮೊತ್ತವು ಗ್ರಾಹಕರ ನಾಮಿನಿಗೆ ಸಿಗುತ್ತದೆ. ವಾರ್ಷಿಕವಾಗಿ ೪೩೬ ರೂ.ಗಳನ್ನು ಪಾವತಿಸಿ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮೆಯನ್ನು ಮಾಡಿಸಿಕೊಂಡಲ್ಲಿ ಯಾವುದೇ ರೀತಿಯಲ್ಲಿ ಮರಣ ಹೊಂದಿದರೆ ಅಂತವರ ನಾಮಿನಿಗೂ ಕೂಡ ೨ ಲಕ್ಷ ವಿಮಾ ಮೊತ್ತ ಸಿಗುತ್ತದೆ ಎಂದು ಹೇಳಿದರು. ಆರ್ಥಿಕ ಸಮಾಲೋಚಕ ನಬಿ ಮಾತನಾಡಿ, ಪ್ರತಿಯೊಬ್ಬರು ಕೆವೈಸಿ ಕಡ್ಡಾಯವಾಗಿ ಮಾಡಿಸಕೊಳ್ಳುವಂತೆ ತಿಳಿಸಿದು. ಆರ್ಥಿಕ ಸಮಾಲೋಚಕ ಸಿ.ಜಿ. ಹರೀಶ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್ ಮಾತನಾಡಿದರು.