ಸಿದ್ದಾಪುರ, ಸೆ. ೬: ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಎಚ್ಚರಿಸಿದ್ದಾರೆ. ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ಮಾದಕವಸ್ತು ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದಾಪುರ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿಗಳು ಮಾದಕ ವಸ್ತುಗಳನ್ನು ವ್ಯಾಪಾರ ಮಾಡುವುದಾಗಲಿ ಹಾಗೂ ಸೇವನೆ ಮಾಡುವುದು ಕಂಡುಬAದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.
ಮಾದಕ ವಸ್ತುಗಳನ್ನು ಮಾರಾಟ ಮಾಡುವ ಹಾಗೂ ಸೇವನೆ ಮಾಡುವ ವ್ಯಕ್ತಿಗಳ ಬಗ್ಗೆ ಮಾಹಿತಿ ಕಂಡು ಬಂದಲ್ಲಿ ಪೊಲೀಸ್ ಇಲಾಖೆಗೆ ತಿಳಿಸುವಂತೆ ಹೇಳಿದರು. ವಿದ್ಯಾರ್ಥಿಗಳು ಮಾದಕ ವಸ್ತುವಿನಿಂದ ದೂರವಿರಬೇಕು.
ಡ್ರಗ್ಸ್ನಿಂದಾಗಿ ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಯುವಕರು ಕೂಡ ಮಾದಕ ವಸ್ತು ಸೇವನೆಯಿಂದ ದರೋಡೆ ಕೊಲೆ ಸುಲಿಗೆ ಪ್ರಕರಣದಲ್ಲಿ ಸಿಲುಕುತಿದ್ದಾರೆ ಎಂದು ತಿಳಿಸಿದರು. ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮುಕ್ತ ಗ್ರಾಮವಾಗಿ ಮಾಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಔಷಧಿ ಅಂಗಡಿಗಳಲ್ಲಿ ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಿಗಳನ್ನು ನೇರವಾಗಿ ನೀಡದಂತೆ ಮಂಜುನಾಥ್ ತಿಳಿಸಿದರು. ಉತ್ತಮ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿಗಳು ಕೂಡ ಮಾದಕ ವಸ್ತುಗಳಿಂದ ದೂರವಿದ್ದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರೇವಣ್ಣ ಮಾತನಾಡಿ ಮಾದಕ ವಸ್ತುಗಳ ಸೇವನೆಯಿಂದಾಗಿ ಹಲವಾರು ರೋಗಗಳು ಹರಡುವ ಸಾಧ್ಯತೆ ಇದೆ ಎಂದರು. ಇದೇ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಜ್ಞೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.