ಮಡಿಕೇರಿ, ಸೆ. ೬: ಶಾಲಾ ಶಿಕ್ಷಣ ಇಲಾಖೆಯಲ್ಲಿ ಉಪ ನಿರ್ದೇಶಕ(ಆಡಳಿತ)ರಾಗಿ ಸೇವೆ ಸಲ್ಲಿಸುತ್ತಿದ್ದು ವರ್ಗಾವಣೆಗೊಂಡ ಡಿಡಿಪಿಐ ಸಿ. ರಂಗಧಾಮಪ್ಪ ಅವರನ್ನು ಶಿಕ್ಷಣ ಇಲಾಖೆಯ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಡಿಡಿಪಿಐ ಕಚೇರಿಯಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿರ್ಗಮಿತ ಡಿಡಿಪಿಐ ಸಿ. ರಂಗಧಾಮಪ್ಪ ಅವರನ್ನು ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ವತಿಯಿಂದ ಗೌರವಿಸಲಾಯಿತು.

ಸಿ. ರಂಗಧಾಮಪ್ಪ ಅವರು ಮಾತನಾಡಿ, ಶಿಕ್ಷಣ ಇಲಾಖೆಯ ಸೇವೆಯು ಅನನ್ಯವಾದ ಸೇವೆ. ಇದನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ನಿರ್ವಹಿಸುವ ಮೂಲಕ ಎಲ್ಲರೂ ಇಲಾಖೆಯ ಘನತೆ ಮತ್ತು ವೃತ್ತಿಗೌರವವನ್ನು ಹೆಚ್ಚಿಸಬೇಕು ಎಂದರು.

ನೂತನ ಡಿಡಿಪಿಐ ಬಸವರಾಜು ಮಾತನಾಡಿ, ಶೈಕ್ಷಣಿಕವಾಗಿ ಉತ್ತಮ ಹೆಸರು ಪಡೆದಿರುವ ಕೊಡಗಿನಲ್ಲಿ ಈ ಹಿಂದಿನ ಡಿಡಿಪಿಐ ರಂಗಧಾಮಪ್ಪ ಅವರು ಕೈಗೊಂಡ ಶೈಕ್ಷಣಿಕ ಯೋಜನೆಗಳನ್ನು ಎಲ್ಲರ ಸಹಕಾರದಿಂದ ಮುಂದುವರೆಸುವ ಮೂಲಕ ಪ್ರಸಕ್ತ ಸಾಲಿನಲ್ಲಿ ಕೂಡ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸುಧಾರಣೆ ತರುವ ಮೂಲಕ ರಾಜ್ಯಮಟ್ಟದಲ್ಲಿ ಉತ್ತಮ ಸ್ಥಾನ ಪಡೆಯಲು ತಾವು ಶ್ರಮಿಸುವುದಾಗಿ ತಿಳಿಸಿದರು.

ಕೂಡಿಗೆ ಡಯಟ್ ಪ್ರಾಂಶುಪಾಲ ಡಿ. ಉದಯ್ ಕುಮಾರ್ ಮಾತನಾಡಿ, ಇಲಾಖೆಯಲ್ಲಿ ಎಲ್ಲರೂ ಜತೆಗೂಡಿ ಕಾರ್ಯನಿರ್ವಹಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕಿದೆ ಎಂದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಡಿಡಿಪಿಐ ಆಗಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಸುಧಾರಿಸಲು ಡಿಡಿಪಿಐ ರಂಗಧಾಮಪ್ಪ ಅವರು ಕೈಗೊಂಡ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳು ಮಾದರಿಯಾದುದು ಎಂದರು.

ಡಿಡಿಪಿಐ ರಂಗಧಾಮಪ್ಪ ಅವರು ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕೈಗೊಂಡ ಉತ್ತಮ ಸೇವೆ ಸಲ್ಲಿಸಿದ ಕುರಿತು ಡಿವೈಪಿಸಿಗಳಾದ ಎಂ. ಕೃಷ್ಣಪ್ಪ, ಸೌಮ್ಯ ಪೊನ್ನಪ್ಪ, ನಿವೃತ್ತ ಶಿಕ್ಷಣಾಧಿಕಾರಿ ಎಂ. ಮಹಾದೇವಸ್ವಾಮಿ ಅವರು ಮಾತನಾಡಿದರು.

ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಹೇಮಂತ್ ರಾಜ್, ಜಿಲ್ಲಾ ಶಿಕ್ಷಣಾಧಿಕಾರಿ ಡಾ. ಸದಾಶಿವಯ್ಯ ಎಸ್. ಪಲ್ಲೇದ್, ನಿವೃತ್ತ ಶಿಕ್ಷಣಾಧಿಕಾರಿ ಶಿವಕುಮಾರ್, ಕಚೇರಿಯ ಪತ್ರಾಂಕಿತ ಅಧಿಕಾರಿ ಪಿ.ಎಸ್. ನಟರಾಜ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಜಿ. ಕುಮಾರ್, ಮಾಜಿ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಪ್ರಮುಖರಾದ ಎಂ.ಟಿ. ದಯಾನಂದ ಪ್ರಕಾಶ್, ಪಿ. ನವೀನ್ ಕುಮಾರ್, ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಕೆ.ಪಿ. ಗುರುರಾಜ್, ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್, ಶಿಕ್ಷಕರ ಸಂಘಟನೆಯ ಶರತ್ ಕುಮಾರ್, ಷಫಿ ಉಲ್ಲಾ ಷರೀಫ್, ಶಿವಲಿಂಗ ಇತರರು ಇದ್ದರು.