ಶ್ರೀಮಂಗಲ, ಸೆ. ೭: ಕೊಡವ ಭಾಷೆಯ ಪ್ರತಿಷ್ಠಿತ ಸಾಹಿತ್ಯ ಸಂಸ್ಥೆಯಾದ ‘ಕೊಡವ ತಕ್ಕ್ ಎಳ್ತ್ಕಾರಡ ಕೂಟ’ ಹಾಗೂ ‘ಕಾನೂರು-ಕೋತೂರು ಮಹಿಳಾ ಮಂಡಲ’ದ ಜಂಟಿ ಆಶ್ರಯದಲ್ಲಿ ತಾ. ೧೦ ರ ಬುಧವಾರ ಪೂರ್ವಾಹ್ನ ೧೧-೩೦ ಗಂಟೆಗೆ ಕಾನೂರು-ಕೋತೂರು ಮಹಿಳಾ ಮಂಡಲದಲ್ಲಿ ವಿಶೇಷ ಕೊಡವ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ‘ಜನಪ್ರಿಯ ಕೊಡವ ಸಾಹಿತ್ಯ ಮಾಲೆ’ ಯೋಜನೆಯ ೧೯೩ನೆ, ೧೯೪ನೆ ಹಾಗೂ ೧೯೫ನೆ ಹೆಜ್ಜೆಯ ನೂತನ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ, ಕೊಡವ ಹಾಡು, ಕೊಡವ ಭಾಷೆಯಲ್ಲಿ ಓದುವುದು ಹಾಗೂ ಕೊಡವ ಹಾಸ್ಯ ಸ್ಪರ್ಧೆ ನಡೆಯಲಿದ್ದು ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ಪ್ರಶಂಸನಾಪತ್ರ ನೀಡಲಾಗುವುದು.
ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾನೂರು-ಕೋತೂರು ಮಹಿಳಾ ಮಂಡಲದ ಅಧ್ಯಕ್ಷೆ ಚೊಟ್ಟೆಕ್’ಮಾಡ ಮಾಯಮ್ಮ ಬೋಪಯ್ಯ, ಪುಸ್ತಕಗಳ ದಾನಿಗಳಾದ ಅಜ್ಜಮಾಡ ಲಾಲಿ ಪೊನ್ನಮ್ಮ, ಕೊಳ್ಳಿಮಾಡ ರಾಕಿ ಕಾವೇರಪ್ಪ, ಬಾದುಮಂಡ ಚಿಮ್ಮ ಉತ್ತಯ್ಯ, ೧೯೩ನೆ ಪುಸ್ತಕದ ಲೇಖಕಿ ಚೊಟ್ಟೆಯಾಂಡಮಾಡ ಲಲಿತ ಕಾರ್ಯಪ್ಪ, ೧೯೪ನೆ ಪುಸ್ತಕದ ಲೇಖಕ ಕೊಳ್ಳಿಮಾಡ ಕಟ್ಟಿ ಮುತ್ತಣ್ಣ, ೧೯೫ನೆ ಪುಸ್ತಕದ ಲೇಖಕಿ ಬಾದುಮಂಡ ಬೀನ ಕಾಳಯ್ಯ ಭಾಗವಹಿಸಲಿದ್ದಾರೆ.
ಜಾತಿ, ಧರ್ಮದ ನಿರ್ಬಂಧವಿಲ್ಲದೆ ಕೊಡವ ಭಾಷೆ ಹಾಗೂ ಸಾಹಿತ್ಯದ ಅಭಿಮಾನಿಗಳೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದೆಂದು ‘ಕೂಟ’ದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ತಿಳಿಸಿದ್ದಾರೆ.