ಸೋಮವಾರಪೇಟೆ, ಸೆ. ೭: ಇಲ್ಲಿನ ಜಲಾಲಿಯ ಮಸೀದಿ, ಈದ್ ಮಿಲಾದ್ ಕಮಿಟಿ ಹಾಗೂ ಮಡಿಕೇರಿಯ ರಕ್ತನಿಧಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಜಲಾಲಿಯ ಮದರಸ ಸಭಾಂಗಣದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಜಮೀರ್ ಆಹಮ್ಮದ್ ಮಾತನಾಡಿ, ಇಲ್ಲಿನ ಜಲಾಲಿಯ ಮಸೀದಿ ವತಿಯಿಂದ ಕಳೆದ ಕೆಲವು ವರ್ಷಗಳಿಂದ ರಕ್ತದಾನ ಶಿಬಿರ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ.
ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನದಲ್ಲಿ ಪಾಲ್ಗೊಳ್ಳಬೇಕೆಂದರು. ಜಲಾಲಿಯ ಮಸೀದಿಯ ಅಧ್ಯಕ್ಷ ಕೆ.ಎ. ಆದಮ್ ಮಾತನಾಡಿ, ರಕ್ತಕ್ಕೆ ಯಾವುದೇ ಜಾತಿ ಧರ್ಮದ ಹಂಗಿಲ್ಲ. ತುರ್ತು ಸಂದರ್ಭಗಳಲ್ಲಿ ಯಾರೇ ದಾನ ಮಾಡಿದರೂ, ಅದನ್ನು ಮತ್ತೊಂದು ಜೀವ ಉಳಿಸಲು ಬಳಸಿಕೊಳ್ಳಲಾಗುವುದು. ನಾವು ವರ್ಷಕ್ಕೊಮ್ಮೆಯಾದರೂ, ರಕ್ತದಾನ ಮಾಡಬೇಕಿದೆ. ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗಬೇಕೆAದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಲಾಲಿಯ ಮಸೀದಿಯ ಧರ್ಮಗುರು ಅಬ್ದುಲ್ ಹಮೀದ್ ಸಖಾಫಿ ಮಾತನಾಡಿ, ಮಸೀದಿಯಲ್ಲಿ ಕೆಲವು ವರ್ಷಗಳಿಂದ ಧರ್ಮಾತೀತವಾಗಿ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ಇದರಲ್ಲಿ ಎಲ್ಲರೂ ಪಾಲ್ಗೊಂಡು ರಕ್ತದಾನ ಮಾಡುತ್ತಿರುವುದು ವಿಶೇಷ.
ರಕ್ತದಾನದ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುವ ಮೂಲಕ ಮತ್ತೊಂದು ಜೀವ ಉಳಿಸಲು ರಕ್ತದಾನ ಮಾಡಬೇಕೆಂದರು. ವೇದಿಕೆಯಲ್ಲಿ ಜಲಾಲಿಯ ಮದರಸ ಅಧ್ಯಕ್ಷ ಮುನೀರ್ ಸಹದಿ, ಮಸೀದಿಯ ಉಪಾಧ್ಯಕ್ಷ ಅಶ್ರಫ್, ಪ್ರಧಾನ ಕಾರ್ಯದರ್ಶಿ ಆಸಿಫ್ ಸೇರಿದಂತೆ ಇತರರು ಇದ್ದರು.