ಗೋಣಿಕೊಪ್ಪಲು, ಸೆ. ೬: ಭಾರತೀಯ ಜೀವ ವಿಮಾ ನಿಗಮ ೬೯ ವರ್ಷ ಪೂರೈಸಿದ ಹಿನ್ನಲೆಯಲ್ಲಿ ವೀರಾಜಪೇಟೆ ಶಾಖೆ ವತಿಯಿಂದ ವಿಮಾ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಎಲ್.ಐ.ಸಿ. ಪ್ರತಿನಿಧಿಗಳಿಂದ ಜಾಥಾ ಜರುಗಿತು.
ವೀರಾಜಪೇಟೆಯ ಶಾಖಾ ವ್ಯವಸ್ಥಾಪಕ ಮಧುಸೂಧನ್ ಮುಂದಾಳತ್ವದಲ್ಲಿ ೮೦ಕ್ಕೂ ಅಧಿಕ ಎಲ್ಐಸಿ ಪ್ರತಿನಿಧಿಗಳು ತಮ್ಮ ಕಚೇರಿಯಿಂದ ಜಾಥಾ ಆರಂಭಿಸಿ, ನಗರದ ಗಡಿಯಾರ ಕಂಬ, ಬಸ್ ನಿಲ್ದಾಣ ಮಾರ್ಗವಾಗಿ ಚೌಕಿ ದಾಟಿ ಕಚೇರಿಯಲ್ಲಿ ಜಾಥಾ ಮುಕ್ತಾಯಗೊಂಡಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೀರಾಜಪೇಟೆ ಶಾಖಾ ವ್ಯವಸ್ಥಾಪಕ ಮಧುಸೂದನ್, ೨೦೨೫ರ ಜ. ೨೦ ರಂದು ಒಂದೇ ದಿನ ಭಾರತದಾದ್ಯಂತ ೪,೫೨,೮೩೯ ಪ್ರತಿನಿಧಿಗಳ ಮೂಲಕ ೫,೮೮,೧೦೭ ಪಾಲಿಸಿಗಳನ್ನು ಮಾಡಿಸುವ ಮೂಲಕ ಗಿನ್ನಿಸ್ ದಾಖಲೆಗಳನ್ನು ಮಾಡಲಾಗಿದೆ.
ಆರ್ಥಿಕವಾಗಿ ಹಿಂದುಳಿದ ವಾರ್ಷಿಕವಾಗಿ ೪,೫೦,೦೦೦ ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಕುಟುಂಬದಲ್ಲಿ ಹಾಗೂ ೬೦ಕ್ಕಿಂತ ಹೆಚ್ಚು ಅಂಕ ಪಡೆದು ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ದಾಖಲಾಗಿರುವ ಮಕ್ಕಳಿಗೆ ೧೫ರಿಂದ ೪೦ ಸಾವಿರದವರೆಗೆ ವಾರ್ಷಿಕವಾಗಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಅರ್ಹರಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಪ್ರತಿನಿಧಿಗಳಿಗೆ ವಿವಿಧ ಚಟುವಟಿಕೆಗಳು ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಅಯೋಜಿಸಲಾಗಿತ್ತು.ಅಭಿವೃದ್ದಿ ಅಧಿಕಾರಿಗಳು ಪ್ರತಿನಿಧಿಗಳನ್ನು ಈ ವೇಳೆ ಸನ್ಮಾನಿಸಲಾಯಿತು. ಪ್ರತಿನಿಧಿಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಿಗಮದ ಹಿರಿಯ ಅಧಿಕಾರಿಗಳು, ಹಿರಿಯ ಪ್ರತಿನಿಧಿಗಳು, ಶಾಖಾ ಸಿಬ್ಬಂದಿಗಳು ಭಾಗವಹಿಸಿದ್ದರು.