ಕುಶಾಲನಗರ, ಸೆ. ೭: ಕುಶಾಲನಗರ ಜೆ.ಸಿ.ಐ. ಕಾವೇರಿ ವತಿಯಿಂದ ತಾ. ೯ ರಿಂದ ೧೫ ರವರೆಗೆ ಜೆ.ಸಿ. ಸಪ್ತಾಹ ೨೦೨೫ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೆ.ಸಿ.ಐ. ಜೋನ್ ೧೪ರ ಮೀಡಿಯ ಕೋಆರ್ಡಿನೇಟರ್ ಎಂ.ಜೆ, ರಜನಿಕಾಂತ್ ತಿಳಿಸಿದರು.
ಕುಶಾಲನಗರ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆ.ಸಿ. ಇಂಡಿಯಾ ವತಿಯಿಂದ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಿದ್ದು ಅದರಂತೆ ಜೆ.ಸಿ. ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ೭ ದಿನಗಳ ಕಾಲ ಪ್ರತಿ ದಿನ ಎರಡು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಸಾರ್ವಜನಿಕವಾಗಿ ಜೆಸಿಐ ಧ್ವಜಾರೋಹಣ, ಜೆ.ಸಿ.ಐ. ಹೆಮ್ಮೆಯ ಬಗ್ಗೆ ರೀಲ್ಸ್ ರಚಿಸುವುದು, ಕೌಶಲ್ಯಗಳ ಬಗ್ಗೆ ತರಬೇತಿ, ನಿರುದ್ಯೋಗಿಗಳಿಗೆ, ಸೌಲಭ್ಯ ವಂಚಿತರಿಗೆ ಕಾರ್ಯಗಾರ, ಯೋಗ ಶಿಬಿರ, ನೆಟ್ ವರ್ಕಿಂಗ್ ಮೀಟ್, ಕೃತಜ್ಞತೆ ಸಮರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಜೆ.ಸಿ.ಐ. ಕುಶಾಲನಗರ ಅಧ್ಯಕ್ಷೆ ತೇಜ ದಿನೇಶ್ ಮಾತನಾಡಿ, ಜೆ.ಸಿ. ಬಗ್ಗೆ ಬಹಳ ಮಂದಿಗೆ ಮಾಹಿತಿಯ ಕೊರತೆಯಿದೆ. ಜೆ.ಸಿ. ಎಂದರೇನು, ಜೆ.ಸಿ. ಯ ಕಾರ್ಯಚಟುವಟಿಕೆಗಳು ಏನು ಎಂಬುದನ್ನು ಮನವರಿಕೆ ಮಾಡಲು ಈ ಜೆ.ಸಿ. ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವ ಸಮೂಹವನ್ನು ಗಮನದಲ್ಲಿರಿಸಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದು ಆ ಮೂಲಕ ಅವರಲ್ಲಿ ವ್ಯಕ್ತಿತ್ವ ವಿಕಸನದ ಜೊತೆಗೆ ಜೆ.ಸಿ. ಯೆಡೆಗೆ ಸೆಳೆಯುವ ಉದ್ದೇಶ ಹೊಂದಲಾಗಿದೆ ಎಂದರು. ಜೆ.ಸಿ. ವತಿಯಿಂದ ಸರಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಸೌಲಭ್ಯ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಸಾಲಿನಲ್ಲಿ ಕುಶಾಲನಗರದ ಐವರು ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನದ ಸೌಲಭ್ಯ ಪಡೆದುಕೊಂಡಿದ್ದಾರೆ. ಮುಂದೆಯೂ ಕೂಡ ಹೆಚ್ಚಿನ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕೆAದು ಕೋರಿದರು. ಜೆ.ಸಿ. ವಲಯ ಉಪಾಧ್ಯಕ್ಷ ಜಗದೀಶ್ ಬಿ. ಮಾತನಾಡಿ, ಜೆ.ಸಿ. ಸಂಸ್ಥೆಯ ಬಗ್ಗೆ ವಿವರಣೆ ನೀಡಿದರು.ಗೋಷ್ಠಿಯಲ್ಲಿ ಸಿರಿ ಘಟಕದ ಅಧ್ಯಕ್ಷ ರವಿ ಸಿ, ಸದಸ್ಯರಾದ ಕೋಮಲ, ಕಾವೇರಮ್ಮ ಇದ್ದರು.