*ಗೋಣಿಕೊಪ್ಪ, ಸೆ. ೭: ದಸರಾ ಉದ್ಘಾಟನೆಗೆ ಕಥೆಗಾರ್ತಿ ಭಾನು ಮುಷ್ತಾಕ್ ಅವರನ್ನು ಆಹ್ವಾನಿಸುವ ನಿರ್ಧಾರವನ್ನು ತಕ್ಷಣ ಹಿಂತೆಗೆದುಕೊಳ್ಳುವAತೆ ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಮೋಹನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿತು.
ಉದ್ಘಾಟನೆಗೆ ಡಾ. ಎಸ್.ಎಲ್. ಭೈರಪ್ಪ ಅವರಂತಹ ಗಣ್ಯರನ್ನು ಆಹ್ವಾನಿಸುವಂತೆ ಮನವಿ ಪತ್ರ ಸಲ್ಲಿಸಿತು.
ಮೈಸೂರು ದಸರಾ ಕೇವಲ ಸಾಂಸ್ಕೃತಿಕ ಹಬ್ಬವಲ್ಲ, ಅದು ಕರ್ನಾಟಕದ ಅತಿ ದೊಡ್ಡ ಧಾರ್ಮಿಕ ಹಾಗೂ ಪಾರಂಪರಿಕ ಹಬ್ಬ. ಇಂತಹ ಪವಿತ್ರ ಹಬ್ಬದ ಉದ್ಘಾಟನೆಗೆ ಆಹ್ವಾನಿತ ಮುಖ್ಯ ಅತಿಥಿಯು ದೇವಿಯ ಮೇಲೆ ಶ್ರದ್ದೆ, ಮೂರ್ತಿಪೂಜೆಯ ಮೇಲೆ ಭಕ್ತಿ ಹಾಗೂ ನಾಡದೇವಿಯ ಮೇಲೆ ಗೌರವ ಹೊಂದಿರಬೇಕು. ಆದರೆ, ಭಾನು ಮುಷ್ತಾಕ್ ಅವರು ಹಿಂದಿನ ಭಾಷಣಗಳಲ್ಲಿ ನಾಡದೇವಿ ಭುವನೇಶ್ವರಿ ದೇವಿಯನ್ನು ನಂಬುವುದಿಲ್ಲವೆAದು ಸ್ಪಷ್ಟವಾಗಿ ಹೇಳಿದ್ದು, ದತ್ತಪೀಠ ಹೋರಾಟದ ಸಂದರ್ಭದಲ್ಲೂ ಮುಸ್ಲಿಂ ಸಮುದಾಯದ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂತಹ ವ್ಯಕ್ತಿಯನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವುದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದAತಾಗುತ್ತದೆ.
ಕರ್ನಾಟಕ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವ ಅಸಂಖ್ಯಾತ ಗಣ್ಯರನ್ನು ಹೊಂದಿದೆ. ಪ್ರಸಿದ್ಧ ಸಾಹಿತಿ ಡಾ. ಎಸ್. ಎಲ್. ಭೈರಪ್ಪ ಅವರು ಭಾರತದ ಅತ್ಯುನ್ನತ ಸಾಹಿತ್ಯ ಸಮ್ಮಾನಗಳ ಜತೆಗೆ ಪದ್ಮಭೂಷಣ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಅವರ ಸಾಹಿತ್ಯ ಮತ್ತು ದಾರ್ಶನಿಕ ಕೃತಿಗಳು ರಾಷ್ಟçಮಟ್ಟದಲ್ಲಿ ಕೀರ್ತಿ ತಂದುಕೊಟ್ಟಿವೆ. ಇಂತಹ ಕೀರ್ತಿಶಾಲಿ ವ್ಯಕ್ತಿಯನ್ನು ಕಡೆಗಣಿಸಿ ವಿದೇಶಿ ಬೂಕರ್ ಪ್ರಶಸ್ತಿ ಪಡೆದವರನ್ನು ಆಹ್ವಾನಿಸುವುದು ಎಷ್ಟು ಸರಿಯೆಂದು ಮನವಿ ಪತ್ರದಲ್ಲಿ ಪ್ರಶ್ನಿಸಲಾಗಿದೆ.
ಸಮಿತಿಯ ಸಂಚಾಲಕರಾದ ಲಕ್ಷ್ಮಿ ರೆಡ್ಡಿ, ಚೇತನ್ ಬಿ.ಎಂ ಕೊಲ್ಲಿರ ಧರ್ಮಜ ಉತ್ತಪ್ಪ ಇದ್ದರು.