*ಗೋಣಿಕೊಪ್ಪ, ಸೆ. ೮: ಕೋಣ ಗಳನ್ನು ವಾಹನದಲ್ಲಿ ತುಂಬಿಕೊAಡು ಕೇರಳಕ್ಕೆ ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ ವಾಹನ ವಶಪಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
ಸೋಮವಾರ ಬೆಳಿಗ್ಗೆ ೪ ಗಂಟೆಗೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಆಧಾರದಲ್ಲಿ ಗೋಣಿಕೊಪ್ಪ ಠಾಣಾಧಿಕಾರಿ ಬಿ.ಕೆ. ಪ್ರದೀಪ್ ಕುಮಾರ್ ನೇತೃತ್ವದ ತಂಡ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರ ಕ್ಯಾಂಪ್ ಬಳಿ ದಾಳಿ ನಡೆಸಿ ಕಂಟೇನರ್‌ನಲ್ಲಿದ್ದ ೩೪ ಕೋಣಗಳನ್ನು ಪತ್ತೆ ಹಚ್ಚಿದ್ದಾರೆ. ಸಣ್ಣಪ್ರಾಯದ ಹದಿನೈದು ಕೋಣ ಸೇರಿದಂತೆ ಒಟ್ಟು ೩೪ ಕೋಣಗಳು ವಾಹನದಲ್ಲಿ ಬಂಧಿಯಾಗಿದ್ದವು. ಪೊಲೀಸರ ದಾಳಿ ಸೂಚನೆ ತಿಳಿಯುತ್ತಿದ್ದಂತೆ ಚಾಲಕ ಕಂಟೇನರ್ ಬಿಟ್ಟು ನಾಪತ್ತೆಯಾಗಿದ್ದಾನೆ. ವೀರಾಜಪೇಟೆ ಉಪಪೋಲಿಸ್ ಅಧೀಕ್ಷಕ ಮಹೇಶ್ ಕುಮಾರ್ ಮಾರ್ಗದರ್ಶನದಂತೆ, ವೃತ್ತ ನಿರೀಕ್ಷಕ ಶಿವರಾಜ್ ಅರ್ ಮುಧೋಳ ನೇತೃತ್ವದಲ್ಲಿ, ಉಪನೀರಿಕ್ಷಕ ಪ್ರದೀಪ್ ಕುಮಾರ್ ಕ್ರಮ ತೆಗೆದುಕೊಂಡಿದ್ದಾರೆ. - ಎನ್.ಎನ್. ದಿನೇಶ್