ವೀರಾಜಪೇಟೆ, ಸೆ. ೮: ಪಟ್ಟಣದಿಂದ ಹೊರ ಜಿಲ್ಲೆಗಳಿಗೆ ಸಾಕಷ್ಟು ಬಸ್ ಸಂಚಾರವಿಲ್ಲದ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು. ವೀರಾಜಪೇಟೆಯ ಗೌರಿಗಣೇಶ ವಿಸರ್ಜನೋತ್ಸವ ಹಾಗೂ ಈದ್ ಮಿಲಾದ್ ಮತ್ತು ಓಣಂ ಪ್ರಯುಕ್ತ ಸಾಕಷ್ಟು ಮಂದಿ ಕಳೆದ ೨-೩ ದಿನಗಳಿಂದ ಪಟ್ಟಣಕ್ಕೆ ಆಗಮಿಸಿದ್ದರು. ಶೋಭಾಯಾತ್ರೆಯ ಅಂಗವಾಗಿ ಶನಿವಾರ ಮಧ್ಯಾಹ್ನದ ಬಳಿಕ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಿದ್ದರಿಂದ ಬೆಂಗಳೂರು ಮೈಸೂರು ಸಹಿತ ಹಲವು ಊರುಗಳಿಂದ ಬಸ್‌ಗಳು ನಗರಕ್ಕೆ ಆಗಮಿಸಿಲ್ಲ. ಇದರಿಂದ ಭಾನುವಾರ, ಸೋಮವಾರ ಬೆಳಿಗ್ಗೆ ಪಟ್ಟಣದಿಂದ ಬೆಂಗಳೂರು, ಮೈಸೂರು, ಕೇರಳದ ಕಡೆಗೆ ಸಂಚರಿಸುವ ವಾಹನಗಳ ಸಂಖ್ಯೆ ಕಡಿಮೆಯಿದ್ದು, ಇರುವ ಬಸ್‌ಗಳು ಜನರಿಂದ ಭರ್ತಿಯಾಗಿದ್ದವು. ಇದರಿಂದ ಸಮಸ್ಯೆ ಅನುಭವಿಸುವಂತಾಯಿತು.