ಸೋಮವಾರಪೇಟೆ, ಸೆ. ೯: ಪ್ರಸಕ್ತ ಸಾಲಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೊಡಗಿನ ಪ್ರಮುಖ ಬೆಳೆಯಾದ ಕಾಫಿ ಸೇರಿದಂತೆ ಕರಿಮೆಣಸು, ಏಲಕ್ಕಿ, ಕಿತ್ತಳೆ, ಅಡಿಕೆ ಬೆಳೆಗಳು ಭಾಗಶಃ ನಷ್ಟವಾಗಿದ್ದು, ಕೆಲವೆಡೆ ಹಾನಿಯ ಪ್ರಮಾಣ ಶೇ.೭೦ರಷ್ಟು ದಾಟಿದೆ. ಹೀಗಿದ್ದರೂ ಸ್ಥಳೀಯ ಶಾಸಕರು, ಜಿಲ್ಲಾಡಳಿತ, ರಾಜ್ಯ ಸರ್ಕಾರ ಯಾವುದೇ ಪರಿಹಾರ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿರುವ ಭಾರತೀಯ ಜನತಾ ಪಕ್ಷದ ಮುಖಂಡರು, ತಕ್ಷಣ ರಾಜ್ಯ ಸರ್ಕಾರ ಕಾಫಿ ಬೆಳೆಗಾರರ ಹಿತ ಕಾಪಾಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಮಾಜಿ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರುಗಳ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರುಗಳು ಅತಿ ಹೆಚ್ಚು ಮಳೆಬಿದ್ದು ಫಸಲು ಹಾನಿಯಾಗಿರುವ ಸೋಮವಾರಪೇಟೆ ತಾಲೂಕಿನ ತೋಳೂರುಶೆಟ್ಟಳ್ಳಿ, ಶಾಂತಳ್ಳಿ, ಬೆಟ್ಟದಳ್ಳಿ, ಹರಗ, ಗರ್ವಾಲೆ ಗ್ರಾಮ ಪಂಚಾಯಿತಿಯ ಸೂರ್ಲಬ್ಬಿ, ಮಕ್ಕಂದೂರು ಪಂಚಾಯ್ತಿಯ ಮುಕ್ಕೋಡ್ಲು, ಗಾಳಿಬೀಡು ಪಂಚಾಯ್ತಿಯ ಗಾಳಿಬೀಡು, ಕಾಲೂರು ಗ್ರಾಮಗಳಿಗೆ ಭೇಟಿ ನೀಡಿ ಫಸಲು ನಷ್ಟದ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು. ಸರಾಸರಿ ೧೦೦ ರಿಂದ ೧೨೦ ಇಂಚು ಮಳೆಯಾಗುವ ಪ್ರದೇಶಗಳಲ್ಲಿ ಈಗಾಗಲೇ ೧೬೦ ರಿಂದ ೨೦೦ ಇಂಚಿಗೂ ಅಧಿಕ ಮಳೆಯಾಗಿದೆ. ಪರಿಣಾಮ ಅರೇಬಿಕಾ ಹಾಗೂ ರೋಬಸ್ಟಾ ಕಾಫಿ ಭಾರೀ ಪ್ರಮಾಣದಲ್ಲಿ ಉದುರಿ ಮಣ್ಣು ಪಾಲಾಗಿದೆ. ಕೆಲವು ಸ್ಥಳಗಳಲ್ಲಿ ಕಾಫಿ ಗಿಡಗಳ ಎಲೆಗಳೂ ಸಹ ಉದುರಿ ಹೋಗಿದ್ದು ಶೇ. ೭೦ರಷ್ಟು ಫಸಲು ನಷ್ಟವಾಗಿದೆ. ಗಿಡಗಳು ಚೇತರಿಸಿಕೊಳ್ಳುವುದೂ ಅಸಾಧ್ಯವಾಗಿದೆ. ಕರಿಮೆಣಸು ಹುಡುಕಿದರೂ ಇಲ್ಲ ಎನ್ನುವಂತಾಗಿದೆ. ಏಲಕ್ಕಿ ಕೊಳೆತು ಹೋಗಿದ್ದು, ಕಿತ್ತಳೆ ಮಾಯವಾಗಿದೆ. ಅಡಿಕೆ ಫಸಲು ಅತಿ ಶೀತಕ್ಕೆ ಹಾಳಾಗಿದೆ. ಇಷ್ಟೆಲ್ಲಾ ಸಂಕಷ್ಟಗಳ ಸರಮಾಲೆಯಲ್ಲಿ ಬೆಳೆಗಾರರಿದ್ದರೂ ಸ್ಥಳೀಯ ಜಿಲ್ಲಾಡಳಿತ, ಶಾಸಕರುಗಳು, ರಾಜ್ಯ ಸರ್ಕಾರ ಪರಿಹಾರಕ್ಕೆ ಕ್ರಮವಹಿಸದೇ ನಿರ್ಲಕ್ಷö್ಯ ತೋರಿದ್ದಾರೆ ಎಂದು ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.

ತೋಳೂರುಶೆಟ್ಟಳ್ಳಿಯ ಸಿ.ಕೆ. ಶಿವಕುಮಾರ್ ಕುಟುಂಬಕ್ಕೆ ಸೇರಿದ ಕಾಫಿ ತೋಟ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯ ನಗರಳ್ಳಿ ಗ್ರಾಮದಲ್ಲಿರುವ ಎ.ಆರ್. ಚಂಗಪ್ಪ ಅವರಿಗೆ ಸೇರಿದ ಕಾಫಿ ತೋಟವು ಭಾರೀ ಮಳೆಯಿಂದ ಹಾನಿಯಾಗಿರುವುದನ್ನು ವೀಕ್ಷಿಸಿದ ಮಾಜಿ ಶಾಸಕರುಗಳು, ಸರ್ಕಾರದ ನಿರ್ಲಕ್ಷö್ಯದ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು.

ರೈತರ ರಕ್ಷಣೆಗೆ ನಿಲ್ಲಬೇಕು

ಈ ಸಂದರ್ಭ ಮಾತನಾಡಿದ ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮೇ ಕೊನೆಯ ವಾರದಿಂದಲೇ ಸುರಿದ ಭಾರೀ ಮಳೆಗೆ ಅರೇಬಿಕಾ ಕಾಫಿ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ. ಗಿಡಗಳ ಎಲೆಯೊಂದಿಗೆ ಕಾಫಿಯೂ ಉದುರಿವೆ. ಉಳಿದಿರುವ ಕಾಫಿಯು ಗುಣಮಟ್ಟ ಕಳೆದುಕೊಳ್ಳಲಿದೆ. ಬೆಳೆಗಾರರು ಭಾರೀ ಸಂಕಷ್ಟದಲ್ಲಿದ್ದಾರೆ. ಹೂವು ಆಗುವ ಮೊದಲು ಯೂರಿಯಾ, ನಂತರ ಇತರ ಗೊಬ್ಬರ ಹಾಕಲಾಗಿದ್ದು, ಸ್ಪೆçà ಸಹ ಮಾಡಲಾಗಿದೆ. ಆದರೂ ಮಳೆಯಿಂದಾಗಿ ಎಲ್ಲವೂ ಮಣ್ಣಿನಲ್ಲಿ ಮಣ್ಣಾಗಿದೆ ಎಂದರು.

ಗಿಡಗಳಲ್ಲಿ ಎಲೆಗಳು ಇಲ್ಲದಿರುವುದರಿಂದ ಮುಂದಿನ ಎರಡು ವರ್ಷವೂ ಕಾಫಿ ಫಸಲು ಸಿಗುವುದಿಲ್ಲ. ಇಂತಹ ಗಿಡಗಳನ್ನು ಕಪಾತು ಮಾಡಬೇಕು. ಹೊಸಚಿಗುರು ಬಂದ ನಂತರವಷ್ಟೇ ಕಾಫಿ ಬರುತ್ತದೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಹಣವನ್ನು ಬೇರೆ ಕಾರ್ಯಗಳಿಗೆ ವಿನಿಯೋಗಿಸುವ ಬದಲು ರೈತರಿಗೆ ಪರಿಹಾರವಾಗಿ ನೀಡಬೇಕು. ರಸ್ತೆಗಳಿಗೆ ಬೇರೆ ಅನುದಾನ ತರಬೇಕು. ತಕ್ಷಣಕ್ಕೆ ರೈತರ ರಕ್ಷಣೆಗೆ ಸರ್ಕಾರ ನಿಲ್ಲಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಬಿಜೆಪಿ ಸರ್ಕಾರ ಇದ್ದ ಸಂದರ್ಭ ಒಮ್ಮೆ ೬೬ ಕೋಟಿ, ಮತ್ತೊಮ್ಮೆ ೧೪೨ ಕೋಟಿ ಸೇರಿದಂತೆ ಒಟ್ಟು ೨೦೮ ಕೋಟಿ ಹಣವನ್ನು ಕೊಡಗಿನ ೫೫ ಸಾವಿರ ಬೆಳೆಗಾರರಿಗೆ ಪರಿಹಾರವಾಗಿ ನೀಡಿದ್ದೇವೆ. ಈಗಿನ ಸರ್ಕಾರ ತಕ್ಷಣಕ್ಕೆ ಜಿಲ್ಲೆಯ ಬೆಳೆಗಾರರಿಗೆ ತಲಾ ೮೦ ಸಾವಿರ ಪರಿಹಾರ ನೀಡಬೇಕು. ಕಾಫಿ ಬೆಳೆಗಾರರ ರಕ್ಷಣೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ಸರ್ವೆ ನಡೆಸಬೇಕು

ವೀರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ವಾಡಿಕೆಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಮಳೆಯಾಗಿ, ಬೆಳೆಗಳು ನಾಶಗೊಂಡಿವೆ. ಜಿಲ್ಲಾಡಳಿತ, ಉಸ್ತುವಾರಿ ಸಚಿವರು, ಶಾಸಕರುಗಳು ಪರಿಹಾರ ಸಂಬAಧ ಯಾವುದೇ ಸರ್ವೆ ಮಾಡಿಸಿಲ್ಲ ಎಂದು ಆರೋಪಿಸಿದರು.

ಈಗಾಗಲೇ ಕಾಫಿ ಮಂಡಳಿ, ಕಂದಾಯ, ತೋಟಗಾರಿಕೆ ಇಲಾಖೆಗಳನ್ನು ಒಳಗೊಂಡAತೆ ಜಂಟಿ ಸರ್ವೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿತ್ತು. ನಮ್ಮ ಸರ್ಕಾರವಿದ್ದಾಗ ಮೂರು ವರ್ಷ ನಿರಂತರ ಪರಿಹಾರ ನೀಡಿದ್ದೇವೆ. ದುರದೃಷ್ಟವಶಾತ್ ಇಂದಿನ ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದರು.

ಶಾಸಕರುಗಳು ಕೇವಲ ಪ್ರಚಾರದಲ್ಲೇ ಮುಳುಗಿದ್ದಾರೆ. ಬಿಜೆಪಿ ಅವಧಿಯಲ್ಲಿ ಮಾಡಿರುವ ರಸ್ತೆಗಳಲ್ಲಿ ಸಂಚರಿಸುತ್ತಲೇ ಕಳೆದ ೨೫ ವರ್ಷ ರಸ್ತೆಗಳ ಕಾಲ ಅಭಿವೃದ್ಧಿಯೇ ಆಗಿಲ್ಲ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಬೋಪಯ್ಯ, ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್ ಮೂಲಕ ಮಳೆಹಾನಿ ಪರಿಹಾರಕ್ಕೆ ಹಣ ಬಿಡುಗಡೆಯಾಗಿದೆ. ಪ್ರಸ್ತುತ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ರೂ. ೩೭ ಕೋಟಿ ಅನುದಾನವಿದೆ. ಈ ಹಣವನ್ನು ಇಟ್ಟುಕೊಂಡು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು. ಅರೇಬಿಕಾ ಹಾಗೂ ರೊಬಸ್ಟಾ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಸ್ಪಂದಿಸಬೇಕು. ಶಾಸಕರು, ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು. ತಕ್ಷಣ ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕು. ಈಗಿನ ಸರ್ಕಾರ ಮಾತೆತ್ತಿದರೆ ಗ್ಯಾರಂಟಿ ಅಂತ ಹೇಳೋದು ಬಿಟ್ಟರೆ ಬೇರೆ ಯಾವುದೇ ಕೆಲಸ ಮಾಡುತ್ತಿಲ್ಲ. ಇನ್ನಾದರೂ ಪರಿಹಾರಕ್ಕೆ ಕ್ರಮ ವಹಿಸಬೇಕೆಂದು ಬೋಪಯ್ಯ ಒತ್ತಾಯಿಸಿದರು.

ರೈತರ ಸಹಾಯಕ್ಕೆ ಬರಬೇಕು

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ; ನಾಲ್ಕು ತಿಂಗಳ ಕಾಲ ಎಡೆಬಿಡದೆ ಮಳೆ ಸುರಿದಿರುವುದರಿಂದ ರೈತ ನಷ್ಟ ಅನುಭವಿಸುವಂತಾಗಿದೆ. ರೈತರು ಜೀವನ ಸಾಗಿಸಲು ಕಷ್ಟವಾಗಿದ್ದು, ಕೃಷಿ ಮಾಡುವ ಪರಿಸ್ಥಿತಿಯಲ್ಲಿಯೇ ಇಲ್ಲ. ಈ ನಿಟ್ಟಿನಲ್ಲಿ ಪ್ರವಾಸ ಮಾಡಿ ಪರಿಶೀಲನೆ ನಡೆಸಿ ರಾಜ್ಯ, ಕೇಂದ್ರ ಸರಕಾರಗಳಿಗೆ ವರದಿ ಸಲ್ಲಿಸಲಾಗುವದು. ಸರಕಾರ ಸೂಕ್ತ ಪರಿಹಾರ ನೀಡಬೇಕಿದೆ. ರೈತರ ಸಾಲ ಮನ್ನಾ ಮಾಡಬೇಕಿದೆ. ಜನಪ್ರತಿನಿಧಿಗಳು ಕೂಡ ಸ್ಪಂದಿಸಿ ರೈತರ ಸಹಾಯಕ್ಕೆ ಬರಬೇಕಿದೆ ಎಂದು ಹೇಳಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಅರುಣ್‌ಕುಮಾರ್, ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್ ಗೌಡ, ಕೃಷಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್‌ಚಂದ್ರ, ಮಂಡಲ ಅಧ್ಯಕ್ಷ ಮಚ್ಚಂಡ ಪ್ರಕಾಶ್, ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಸೋಮೇಶ್, ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಡೀನ್ ಬೋಪಣ್ಣ, ಪಕ್ಷದ ಮುಖಂಡರಾದ ಮನುಕುಮಾರ್ ರೈ, ದರ್ಶನ್ ಜೋಯಪ್ಪ, ಕೆ.ಕೆ. ಸುಧಾಕರ್, ಮೋಕ್ಷಿಕ್ ರಾಜ್, ಪ್ರವೀಣ್, ಲಿಂಗರಾಜು, ಪ್ರೇಮ್‌ಸಾಗರ್, ಮಧುಕುಮಾರ್, ವಿಜಯಕುಮಾರ್ ಸೇರಿದಂತೆ ಇತರರು ಇದ್ದರು.