ಮಡಿಕೇರಿ, ಸೆ. ೯: ಹಲ್ಲೆಗೈದು, ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಬಳಿಕ ನಾಪತ್ತೆಯಾಗಿದ್ದ ಆರೋಪಿಗೆ ನ್ಯಾಯಾಲಯ ೫ ವರ್ಷ ಶಿಕ್ಷೆಯೊಂದಿಗೆ ರೂ. ೧೦ ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

ತಾ. ೨೩.೫.೨೦೧೨ ರಂದು ರಾತ್ರಿ ೯.೩೦ರ ವೇಳೆಗೆ ನಂದಕುಮಾರ್ (ಗಣೇಶ್) ಎಂಬವರು ಮಡಿಕೇರಿಯಿಂದ ಮಕ್ಕಂದೂರಿನ ಉದಯಗಿರಿಗೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಕರ್ಣಂಗೇರಿ ಗ್ರಾಮದ ಬಳಿ ೬ ಮಂದಿ ಬೈಕ್‌ಗಳಲ್ಲಿ ಬಂದು ಕಾರನ್ನು ಅಡ್ಡಗಟ್ಟಿ ನಂದಕುಮಾರ್ ಮೇಲೆ ಮಾರಣಾಂತಿಕ ಹಲ್ಲೆಗೈದಿದ್ದರು. ಅಲ್ಲಿಗೆ ಬಂದ ಅವರ ಸಂಬAಧಿ ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಪ್ರಕರಣ ದಾಖಲಿಸಿಕೊಂಡಿದ್ದ ಮಡಿಕೇರಿ ಗ್ರಾಮಾಂತರ ಪೊಲೀಸರು ಖಲೀಲ್ ಬಾಷಾ ಸೇರಿದಂತೆ ೮ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ೧ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ತಾ. ೧೪.೯.೨೦೧೭ರಂದು ೮ ಆರೋಪಿಗಳ ಪೈಕಿ ೫ ಆರೋಪಿಗಳ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಈ ಪ್ರಕರಣ ವಿಚಾರಣೆ ಮುನ್ನ ಜಾವೇದ್ (ತಾಹೀರ್ ಪರ್ವೆಜ್) ತಲೆಮರೆಸಿಕೊಂಡಿದ್ದ. ಆತನ ವಿರುದ್ಧದ ಪ್ರಕರಣ ಪ್ರತ್ಯೇಕಗೊಳಿಸಿ ಹುಡುಕಾಟ ನಡೆಸಿದಾಗ ೨೦೨೩ರಲ್ಲಿ ಪತ್ತೆಯಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದು, ಈತನ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪರಮೇಶ್ವರ ಪ್ರಸನ್ನ ಅವರು ಕೊಲೆಯತ್ನ ಸಾಬೀತಾದ ಹಿನ್ನೆಲೆ ಈತನಿಗೆ ೫ ವರ್ಷಗಳ ಶಿಕ್ಷೆಯೊಂದಿಗೆ ರೂ. ೧೦ ಸಾವಿರ ದಂಡ ವಿಧಿಸಿ ಅದನ್ನು ನೊಂದ ವ್ಯಕ್ತಿ ನಂದಕುಮಾರ್‌ಗೆ ನೀಡುವಂತೆ ಆದೇಶಿಸಿದರು.

ಸರಕಾರಿ ಅಭಿಯೋಜಕರಾದ ಎನ್.ಪಿ. ದೇವೇಂದ್ರ ಅವರು ವಾದ ಮಂಡಿಸಿದರು.