ಶನಿವಾರಸಂತೆ, ಸೆ. ೯: ಇಂದು ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದುತ್ತಿದ್ದು, ಪೋಷಕರು ಕಾನ್ವೆಂಟ್ ವ್ಯಾಮೋಹ ತೊರೆದು ಸರ್ಕಾರಿ ಶಾಲೆಗಳತ್ತ ಮುಖ ಮಾಡಬೇಕು ಎಂದು ೧೯೮೮-೮೯ ರ ಶೈಕ್ಷಣಿಕ ಸಾಲಿನ ನಿಡ್ತ-ಮುಳ್ಳೂರು ಪೂರ್ವ ವಿದ್ಯಾರ್ಥಿಗಳ ಸಂಘ ಹಾಗೂ ಕ್ರೀಡಾ ಸಂಘದ ಅಧ್ಯಕ್ಷ ಜಯಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂರ್ವ ವಿದ್ಯಾರ್ಥಿಗಳ ಸಂಘ ಹಾಗೂ ಕ್ರೀಡಾ ಸಂಘದ ವತಿಯಿಂದ ರೂ.೪೮ ಸಾವಿರ ಮೌಲ್ಯದ ಲ್ಯಾಪ್ ಟಾಪ್ ಅನ್ನು ಮುಖ್ಯಶಿಕ್ಷಕ ಸಿ.ಎಸ್.ಸತೀಶ್ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು. ಇದೇ ಸಂದರ್ಭ ನಿಡ್ತ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ಅಧ್ಯಕ್ಷ ಅಶೋಕ್ ಶಾಲಾ ಗ್ರಂಥಾಲಯಕ್ಕೆ ಟೇಬಲ್ ಹಾಗೂ ಎರಡು ಕಪಾಟುಗಳ ಕೊಡುಗೆ ನೀಡಿದರು. ಸಂಘದ ಕಾರ್ಯದರ್ಶಿ ಮುರುಗನ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಅದೇ ಶಾಲೆಯಲ್ಲಿ ಹಿಂದೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಷಣ್ಮುಖಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯಶಿಕ್ಷಕ ಸಿ.ಎಸ್. ಸತೀಶ್, ಶಿಕ್ಷಕರಾದ ಜಾನ್ ಪಾವ್ಲ್ ಡಿಸೋಜ, ಶೀಲಾ, ಪೂರ್ವ ವಿದ್ಯಾರ್ಥಿಗಳಾದ ರೇಖಾ ಅಶೋಕ್, ಜೆ.ಎಸ್.ಗಣೇಶ್, ಯೋಗೇಶ್, ಮಲ್ಲೇಶ್, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.