ಸುಮಾರು ೬೫ ವಯಸ್ಸಿನ ಹಿರಿಯರೊಬ್ಬರು ಎದುರಿಗೆ ಮಂಕಾಗಿ ಕುಳಿತಿದ್ದರು. ಮೈಕಟ್ಟು ಚೆನ್ನಾಗಿದ್ದರೂ, ಮುಖದಲ್ಲಿ ನಿಸ್ತೇಜ ಭಾವವಿತ್ತು, ಕಣ್ಣುಗಳು ಕಳಾಹೀನವಾಗಿದ್ದವು. ಜೀವನದಲ್ಲಿ ತುಂಬಾ ಏಳು, ಬೀಳುಗಳನ್ನು ಅನುಭವಿಸಿ, ಕಷ್ಟಪಟ್ಟು ಬದುಕಿನ ಮಜಲುಗಳನ್ನು ಏರಿದವರಂತೆ ಅನಿಸುತ್ತಿತ್ತು. ಆಗಾಧ ಜೀವನಾನುಭವವೂ ಸಹ ಇದೆ ಅನ್ನಿಸುವಂತಿದ್ದರು.
ಅವರ ಈ ಪರಿಸ್ಥಿತಿಗೆ ಕಾರಣವೇನು ಎಂಬAತೆ ಪ್ರಶ್ನಾರ್ಥಕವಾಗಿ ಅವರೆಡೆಗೆ ನೋಡಿದೆ. ನನ್ನ ಮನದ ಇಂಗಿತವನ್ನು ಅರಿತ ಅವರು, ಸಾರ್ ನಾನು ನಿಮ್ಮೊಂದಿಗೆ ಪ್ರತ್ಯೇಕವಾಗಿ ಮಾತನಾಡಬೇಕೆಂದು ವಿನಂತಿಸಿಕೊAಡರು.
ಪಕ್ಕದಲ್ಲಿಯೇ ಇದ್ದ ಆಪ್ತ ಸಮಾಲೋಚನಾ ಕೊಠಡಿಗೆ ಹೋದೆವು. ಸ್ವಲ್ಪ ಆರಾಮವಾದಂತೆನಿಸಿ ತಮ್ಮ ಬದುಕಿನ ಬುತ್ತಿಯನ್ನು ಎಳೆ ಎಳೆಯಾಗಿ ಬಿಚ್ಚಿಡಲಾರಂಬಿಸಿದರು.
ಅಷ್ಟೇನೂ ಅನುಕೂಲವಿಲ್ಲದ ಬಡತನದ ಹಳ್ಳಿ ಮನೆಯಲ್ಲಿ ಹುಟ್ಟಿ, ಬೆಳೆದು, ಸಿಕ್ಕ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ವಿದ್ಯಾಭ್ಯಾಸವನ್ನು ಮುಗಿಸಿ ಕಷ್ಟ ಪಟ್ಟು ಸರ್ಕಾರಿ ಕೆಲಸ ಪಡೆದುಕೊಂಡೆ ಸರ್.
ನಂತರದಲ್ಲಿ ಎಲ್ಲಾ ಮಧ್ಯಮ ವರ್ಗಗಳು ಜೀವನ ಸಾಗಿಸಿದಂತೆ ಆರಕ್ಕೇರದೆ, ಮೂರಕ್ಕಿಳಿಯದೆ ಬದುಕು ಸಾಗಿಬಂತು. ನಮ್ಮಂತೆ ನಮ್ಮ ಮಕ್ಕಳು ಕಷ್ಟ ಪಡಬಾರದೆಂದು ಸಾಲ ಸೋಲ ಮಾಡಿ ನನ್ನ ಇಬ್ಬರು ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡಿಸಿದೆ. ಅವರಿಬ್ಬರೂ ಇಂದು ಒಳ್ಳೆಯ ಕಂಪೆನಿಗಳಲ್ಲಿ ಉದ್ಯೋಗ ಸಂಪಾದಿಸಿ ವಿದೇಶಗಳಲ್ಲಿ ಸೆಟ್ಲ್ ಆಗಿದ್ದಾರೆ, ನಾನು ಹಲವಾರು ಬಾರಿ ವಿದೇಶ ಯಾತ್ರೆ ಮಾಡಿ ಬಂದಿದ್ದೇನೆ.
ಈಗAತೂ ಪ್ರತಿ ತಿಂಗಳು ಬರುವ ಪೆನ್ಶನ್‌ನಿಂದ ಜೀವನ ಸಾಗುತ್ತಿದೆ ಎಂದು ಮಾತು ನಿಲ್ಲಿಸಿದರು. ನನಗೆ ಅವರ ಸಮಸ್ಯೆ ಏನೆಂದು ಅರ್ಥವಾಗದೆ, ನೀವೀಗ ಆಸ್ಪತ್ರೆಗೆ ಬಂದ ಕಾರಣವೇನೆಂದು ಕೇಳಿದೆ. ಅಷ್ಟಕ್ಕೇ ಅವರ ಮುಖದಲ್ಲಿ ಮೂಡಿದ ವಿಷಾದದ ಭಾವನೆ ಗಮನಕ್ಕೆ ಬಂತು.
ಅವರು ಮಾತು ಮುಂದುವರಿಸುತ್ತಾ, ಮಕ್ಕಳು ಜೊತೆಯಲ್ಲಿ ಇಲ್ಲದಿದ್ದರೂ ಅದರ ಕೊರತೆ ಕಾಡದಂತೆ ನನ್ನ ಪತ್ನಿ ನನ್ನ ಕಷ್ಟ, ಸುಖಗಳಲ್ಲಿ ಭಾಗಿಯಾಗಿದ್ದಳು.
ಆದರೆ, ಕೆಲವು ತಿಂಗಳ ಹಿಂದೆ ಹಠಾತ್ತಾಗಿ ಹೃದಯಾಘಾತವಾಗಿ ನನ್ನನ್ನು ಒಂಟಿಯಾಗಿ ಬಿಟ್ಟುಹೋಗಿಬಿಟ್ಟಳು. ಅಂದಿನಿAದ ನನಗೆ ಏಕಾಂಗಿತನ, ಬೇಸರ, ಯಾವುದರಲ್ಲಿಯೂ ಆಸಕ್ತಿ ಇಲ್ಲದಾಗಿದೆ, ಸೇವಿಸುವ ಆಹಾರ ರುಚಿಹೀನವಾಗಿದೆ.
ಎಷ್ಟೋ ರಾತ್ರಿಗಳಿಂದ ನಿದ್ರಾಹೀನತೆಯಿಂದ ಬಳಲುತ್ತಿದ್ದೇನೆ, ಪ್ರತಿ ಮುಂಜಾನೆ ಬೇಗನೆ ಎಚ್ಚರವಾಗಿ ಭವಿಷ್ಯದ ದಿನಗಳ ಬಗ್ಗೆ ಆತಂಕವಾಗುತ್ತದೆ. ಇದನ್ನು ಯಾರಲ್ಲಿಯೂ ಹೇಳಲು ಆಗದೆ, ಸುಮ್ಮನಿರಲೂ ಆಗದೆ ತೊಳಲಾಡುತ್ತಿದ್ದೇನೆ.
ವಿದೇಶದಲ್ಲಿರುವ ಮಕ್ಕಳೊಂದಿಗೆ ಸೂಕ್ಷ್ಮವಾಗಿ ಈ ವಿಚಾರ ಪ್ರಸ್ತಾಪಿಸಿದಾಗ ಅವರು ತಾವು ವಾಪಸ್ಸು ಬರುವವರೆಗೂ ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಕೊಳ್ಳಬಹುದೆಂಬ ಸಲಹೆ ನೀಡಿ ಅದಕ್ಕೆ ಖರ್ಚಾಗುವ ಹಣವನ್ನೂ ಕಳುಹಿಸಿಕೊಟ್ಟರು.
ಈ ವಿಚಾರ ನೆನೆದು ನನ್ನ ಮನಸ್ಸು ಮತ್ತಷ್ಟು ಕುಗ್ಗಿತು, ಸಾಕು ಇನ್ನು ಈ ಬದುಕು ಎನ್ನಿಸಿ ಆತ್ಮಹತ್ಯೆ ಆಲೋಚನೆಯೂ ಮೂಡಿಬಂತು, ಆದರೆ ಧೃತಿಗೆಡಬಾರದೆಂದು ನಿಮ್ಮಲ್ಲಿ ಸಮಾಲೋಚನೆಗೆ ಬಂದೆ ಎನ್ನುತ್ತಾ ದೀರ್ಘವಾದ ನಿಟ್ಟುಸಿರುಬಿಟ್ಟರು.
ಅವರೊಂದಿಗೆ ಇನ್ನೂ ಹಲವು ಮಾಹಿತಿಗಳನ್ನು ಪಡೆದು, ಸೂಕ್ತವಾದ ಚಿಕಿತ್ಸೆಯನ್ನು ನೀಡಿ, ರೆಗ್ಯುಲರ್ ಆಗಿ ಆಪ್ತ ಸಮಾಲೋಚನೆಗೆ ಬರಬೇಕು ಎಂದು ತಿಳಿಸಿ ಹೇಳಿದೆನು.
ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿ, ಬೆಳೆ ನಷ್ಟವಾಗಿ, ಸಾಲದ ಬಾಧೆಯಿಂದ ರೈತ, ಕೌಟುಂಬಿಕ ಕಲಹದಿಂದ ಬೇಸತ್ತ ಗಂಡ ಅಥವಾ ಹೆಂಡತಿ, ಫಲಿಸದ ಪ್ರೀತಿ ಪ್ರೇಮಿಯ ಫಜೀತಿ ಹೀಗೆ ಹತ್ತಾರು ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಅಥವಾ ಅದಕ್ಕೆ ಪ್ರಯತ್ನ ಪಡುವ ವ್ಯಕ್ತಿಗಳ ಬಗ್ಗೆ ಮನಸ್ಸು ಆಲೋಚನೆಯಲ್ಲಿ ಮಗ್ನವಾಯಿತು.
ಪ್ರತಿವರ್ಷ ಸೆಪ್ಟೆಂಬರ್ ಹತ್ತನೆಯ ತಾರೀಖನ್ನು ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸಲಾಗುತ್ತದೆ.
ಜಿಗುಪ್ಸೆಗೊಂಡ ಮನಸ್ಸು ದುಡುಕಿ ಜೀವ ಕಳೆದುಕೊಳ್ಳುವ ಮುನ್ನ, ಅವರನ್ನು ಗುರುತಿಸಿ, ಚಿಕಿತ್ಸೆ ಕೊಡಿಸಿ, ಆಪ್ತ ಸಮಾಲೋಚನೆಯ ಮೂಲಕ ಬದುಕಿನ ಬಗ್ಗೆ ಭರವಸೆ ಮೂಡಿಸಿ, ತನ್ನನ್ನೇ ನಂಬಿರುವ ಕುಟುಂಬದ ಬಗ್ಗೆ, ಸುತ್ತಲಿನ ಸಮಾಜಕ್ಕೆ ನೀಡಬಹುದಾದ ಕೊಡುಗೆ ಬಗ್ಗೆ ತಿಳುವಳಿಕೆ ಇರಬೇಕು.
‘ಮಾನವ ಜನ್ಮ ದೊಡ್ಡದು’, ‘ಈಸಬೇಕು ಇದ್ದು ಜೈಸಬೇಕು’ ಎಂಬ ಹಿರಿಯರ ಅನುಭವದ ನುಡಿಗಳನ್ನು ಸ್ಮರಿಸುತ್ತಾ, ಸಮಸ್ಯೆಗಳಿಗೆ ಅಂಜಿ ಜೀವನಕ್ಕೆ ವಿಮುಖರಾಗಿ ವಿದಾಯ ಹೇಳದೆ,
ಆತ್ಮಸ್ಥೈರ್ಯದಿಂದ ಕಷ್ಟ ಸುಖಗಳನ್ನು ಎದುರಿಸಿ ಜೀವನದಲ್ಲಿ ಮುನ್ನಡೆಯಬೇಕು. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಆತ್ಮಹತ್ಯೆ ಎಂಬ ಪಿಡುಗನ್ನು ಸಮಾಜದಿಂದ ಕಿತ್ತೊಗೆಯಬೇಕು ಎಂಬುದೇ ಆಶಯ.
- ಎಸ್.ವಿ. ಸತೀಶ್ ಕುಮಾರ್, ಸಹ ಪ್ರಾಧ್ಯಾಪಕರು, ಮನೋವೈದ್ಯಕೀಯ ವಿಭಾಗ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ.