ಕಣಿವೆ, ಸೆ. ೯: ಮಿತಿಮೀರಿರುವ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವುದು ಹಾಗೂ ದಾಳಿಯಿಂದ ಸಂಭವಿಸಿದ ಬೆಳೆ ನಷ್ಟಕ್ಕೆ ತ್ವರಿತವಾಗಿ ಪರಿಹಾರ ನೀಡುವಂತೆ ಆಗ್ರಹಿಸಿ ಕಣಿವೆ ಗ್ರಾಮದ ಕೃಷಿಕರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರು.

ಕಣಿವೆ ಅರಣ್ಯ ವ್ಯಾಪ್ತಿಯಲ್ಲಿನ ಆರನೇ ಹೊಸಕೋಟೆ, ಸೀಗೆಹೊಸೂರು, ಚಿನ್ನೇನಹಳ್ಳಿ, ಮರೂರು, ಚೈನ್‌ಗೇಟ್ ಮೊದಲಾದ ಕಡೆಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಬೆಳೆದ ಯಾವುದೇ ಬೆಳೆಗಳು ನಮ್ಮ ಕೈ ಸೇರುತ್ತಿಲ್ಲ. ಅಪಾರ ಪ್ರಮಾಣದ ನಷ್ಟ ಸಂಭವಿಸುತ್ತಲೇ ಇದ್ದರೂ ಕೂಡ ಅರಣ್ಯ ಇಲಾಖೆ ನಮಗೆ ಸೂಕ್ತ ಪರಿಹಾರ ನೀಡುತ್ತಿಲ್ಲ ಎಂದು ಕೃಷಿಕರಾದ ಅರುಣಕುಮಾರ್, ಲೋಕೇಶ್, ಚನ್ನಯ್ಯ, ಶಿವರುದ್ರಪ್ಪ ಮೊದಲಾದವರು ಅಳಲು ತೋಡಿಕೊಂಡರು.

ಮರೂರು ಗ್ರಾಮದ ಕೃಷಿಕ ಹೆಚ್.ಎಸ್. ಭಿಕ್ಷೇಷ್ ಎಂಬವರು ಕಳೆದ ವರ್ಷದ ಮುಂಗಾರಿನಲ್ಲಿ ಬೆಳೆದು ಕಟಾವು ಮಾಡಿದ್ದ ಭತ್ತದ ಫಸಲು ಸಂಪೂರ್ಣ ಕಾಡಾನೆಗಳ ಪಾಲಾಗಿದ್ದರೂ ಕೂಡ ಇದುವರೆಗೂ ನಯಾಪೈಸೆ ಪರಿಹಾರದ ಹಣ ಬಂದಿಲ್ಲ. ಕಾಡಾನೆಗಳ ಹಾವಳಿಯನ್ನು ಶಾಶ್ವತವಾಗಿ ತಡೆಯುವ ಯೋಜನೆ ರೂಪಿಸಬೇಕು. ನಷ್ಟಕ್ಕೊಳಗಾದ ರೈತರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಕೃಷಿಕರು ಆಗ್ರಹಿಸಿದರು. ಈ ಸಂದರ್ಭ ಕೃಷಿಕರ ಅಳಲು ಆಲಿಸಿ ಮನವಿ ಪತ್ರ ಸ್ವೀಕರಿಸಿದ ಉಪವಲಯ ಅರಣ್ಯಾಧಿಕಾರಿ ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.