ಮಡಿಕೇರಿ, ಸೆ. ೧೬: ಬಾಸಿಲ್ ಮಿಷನ್ ಟ್ರಸ್ಟ್ ಜಾಗದ ವಿಚಾರವಾಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ. ಇದೇ ವಿಚಾರಕ್ಕೆ ಸಂಬAಧಿಸಿದAತೆ ಹಲ್ಲೆಗೊಳಗಾದ ವ್ಯಕ್ತಿಯು, ಮನೆಗೆ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಡಿಕೇರಿಯ ನಿವಾಸಿ, ಯು.ಬಿ.ಎಂ.ಸಿ ಜಾಗಗಳ ಉಸ್ತುವಾರಿ ಹೊಂದಿರುವ ಕೆನೆತ್ ಮಾರ್ಷ್ ಮಾಳೇಕರ್ ಹಲ್ಲೆಗೊಳಗಾಗಿರುವ ವ್ಯಕ್ತಿಯಾಗಿದ್ದು, ಹಲ್ಲೆ ನಡೆಸಿದ ೭ ಮಂದಿಯ ವಿರುದ್ಧ ಅವರ ತಂಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಕೆನೆತ್, ತನ್ನ ಮನೆಗೆ ಅಕ್ರಮ ಪ್ರವೇಶ ಮಾಡಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ವೀರಾಜಪೇಟೆ ಪುಲಿಯೇರಿ ಗ್ರಾಮದ ಆನಂದಪುರ ನಿವಾಸಿ ಲತಾ ಸಿರಿಲ್ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಾ.೧೫ ರಂದು ಬೆಳಿಗ್ಗೆ ಕೆನೆತ್, ಆನಂದಪುರದಲ್ಲಿ ಬಾಸಿಲ್ ಮಿಷನ್ ಟ್ರಸ್ಟ್ ಒತ್ತುವರಿಯಾಗಿರುವ ವಿಚಾರವಾಗಿ ಅಮ್ಮತ್ತಿ ಗ್ರಾಮ ಪಂಚಾಯಿತಿಯ ಪಿ.ಡಿ.ಓ ಗೆ ದೂರು ನೀಡಿ ಯು.ಬಿ.ಎಂ.ಸಿ. ಟ್ರಸ್ಟ್ನ ಜಾಗದಲ್ಲಿನ ಕಟ್ಟಡ ಕಾಮಗಾರಿ ವೀಕ್ಷಿಸಿ ಹಿಂತಿರುಗುತ್ತಿದ್ದಾಗ ಪುಲಿಯೇರಿ ಗ್ರಾಮದ ಕೆಲವರು ಅವರನ್ನು ತಡೆದು ತಲೆ, ಕಣ್ಣಿಗೆ ದೊಣ್ಣೆಯಿಂದ ಹೊಡೆದು ಕೆನೆತ್ ಜೊತೆಯಿದ್ದ ಯಶ್ವಂತ್ ಎಂಬವರ ಮೇಲೂ ಹಲ್ಲೆ ನಡೆಸಿದ್ದಾಗಿ ಕೆನೆತ್ ಅವರ ಸಹೋದರಿ ದೂರು ನೀಡಿದ್ದಾರೆ. ಹಲ್ಲೆ ಘಟನೆ ಆದ ನಂತರ ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಕೆನೆತ್ ಅವರು ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದರು.
ಕೆನೆತ್ ಅವರ ವಿರುದ್ಧ ದೂರು ನೀಡಿರುವ ಆನಂದಪುರದ ಲತಾ ಎಂಬವರು, ತಾ.೧೫ ರಂದು ಬೆಳಿಗ್ಗೆ ಕೆನೆತ್, ತಮ್ಮ ಮನೆಗೆ ಅಕ್ರಮ ಪ್ರವೇಶ ಮಾಡಿ, ಬಾಸಿಲ್ ಮಿಷನ್ ಸಂಸ್ಥೆಗೆ ಸೇರಿರುವ ಜಾಗವನ್ನು ತಾವು ಒತ್ತುವರಿ ಮಾಡಿಕೊಂಡಿದ್ದು, ಈ ಜಾಗವನ್ನು ಖಾಲಿ ಮಾಡುವಂತೆ ಬೆದರಿಕೆ ಒಡ್ಡಿದ್ದಾಗಿ ಆರೋಪಿಸಿದ್ದಾರೆ.