ಕುಶಾಲನಗರ, ಸೆ. ೧೯: ಪೌಷ್ಟಿಕ ಸಮತೋಲನ ಆಹಾರ ಸೇವನೆಯಿಂದ ಗರ್ಭಿಣಿ ಮತ್ತು ಮಗು ಇಬ್ಬರು ಆರೋಗ್ಯವಂತರಾಗಿರಲು ಸಾಧ್ಯ ಎಂದು ಕೂಡಿಗೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ದೀಪಿಕಾ ಮೂರ್ತಿ ತಿಳಿಸಿದರು.

ಕುಶಾಲನಗರ ಸಮೀಪ ಗುಮ್ಮನಕೊಲ್ಲಿಯ ವಿನಾಯಕ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಸೀಮಂತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಗರ್ಭಿಣಿಯರ ದೈಹಿಕ ಆರೋಗ್ಯದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದ್ದು, ಮಾನಸಿಕ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು. ಗರ್ಭಿಣಿಯರು ಧನಾತ್ಮಕವಾಗಿ, ಉತ್ತಮ ಆಲೋಚನೆ ಹೊಂದಬೇಕು. ಶಾಂತಿಯಿAದ ಧ್ಯಾನ, ಶ್ಲೋಕ ಹೇಳಿಕೊಂಡಲ್ಲಿ ಜನಿಸುವ ಮಗುವಿನ ಮಾನಸಿಕ ಆರೋಗ್ಯ ಬೆಳವಣಿಗೆ ಸಾಧ್ಯ ಎಂದರು.

ತಾಯಿಯ ಮನಸ್ಸು ಚಿಂತೆ, ದುಗುಡ, ದುಃಖ, ಹಿಂಸೆಯಿAದ ಕೂಡಿದ್ದರೆ ಮಗುವಿನ ಮನಸ್ಥಿತಿಯೂ ಹಾಗೇ ಇರುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿರುವಾಗ ತಾಯಂದಿರ ವಿಚಾರಧಾರೆ ಉತ್ತಮವಾಗಿರಬೇಕು ಎಂದರು.

ಗುಮ್ಮನಕೊಲ್ಲಿ ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಮಮತಾ ಮಾತನಾಡಿ, ಗರ್ಭಿಣಿಯರು ಅಪೌಷ್ಟಿಕ ಆಹಾರ ಸೇವನೆ ಮಾಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಎಲ್ಲರೂ ಪೌಷ್ಟಿಕ ಆಹಾರ ಸೇವಿಸಬೇಕು. ಮಕ್ಕಳು ಆರೋಗ್ಯದಿಂದ ಹುಟ್ಟಲು ತಾಯಿ ಪೌಷ್ಟಿಕ ಆಹಾರ ಸೇವಿಸಬೇಕು ಎಂದರು. ಗರ್ಭಿಣಿಯರ ಆರೈಕೆ, ಆರೋಗ್ಯ, ವಿಶ್ರಾಂತಿ, ವ್ಯಾಯಾಮ ಹಾಗೂ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಮತಾ ಮಾಹಿತಿ ನೀಡಿದರು. ನಂತರ ಗರ್ಭಿಣಿಯರಿಗೆ ಅರಿಶಿಣ, ಕುಂಕುಮ ಹಚ್ಚಿ, ಬಳೆ, ಹಾಕಿ ಶಾಸ್ತೊçÃಕ್ತವಾಗಿ ಸೀಮಂತ ಮಾಡಲಾಯಿತು.

ಇದೇ ಸಂದರ್ಭ ೬ ತಿಂಗಳ ಮಕ್ಕಳಿಗೆ ಅನ್ನಭ್ಯಾಸ ಹಾಗೂ ೩ ವರ್ಷದ ಮಕ್ಕಳಿಗೆ ಅಕ್ಷರಭ್ಯಾಸ ನಡೆಸಲಾಯಿತು. ಈ ಸಂದರ್ಭ ಆಯುರ್ವೇದ ವೈದ್ಯಾಧಿಕಾರಿ ನಂದಿನಿ, ಅಂಗನವಾಡಿ ಕಾರ್ಯಕರ್ತೆಯರಾದ ಪುಟ್ಟಮ್ಮ, ನೀಲಮ್ಮ, ಚಂದ್ರಿಕಾ, ನಾಗರತ್ನ, ಕವಿತಾ, ನಾಗಮಣಿ, ಸರಸ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.