ಮಡಿಕೇರಿ, ಸೆ. ೧೯: ಕೆ. ಬಾಡಗ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕರು, ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ತಾ. ೧೨ ರಿಂದ ಅಕ್ಟೋಬರ್ ೧೧ ರವರೆಗೆ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು. ಗರ್ಭಿಣಿ, ಬಾಣಂತಿಯರು ಮಕ್ಕಳಲ್ಲಿ ಇರುವ ಅಪೌಷ್ಟಿಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪೌಷ್ಟಿಕ ಆಹಾರದ ಮಹತ್ವವನ್ನು ತಿಳಿಸಿ ಪೌಷ್ಟಿಕ ಆಹಾರವನ್ನು ಬೆಳೆಸಿ ಬಳಸಲು ಪ್ರೋತ್ಸಾಹಿಸಿದರು.
ಸಾಂಪ್ರದಾಯಿಕ ಆಹಾರವನ್ನು ಬಳಸಲು, ಮಕ್ಕಳನ್ನು ಜಂಕ್ ಫುಡ್ನಿಂದ ದೂರ ಉಳಿಸಲು ಪೋಷಕರಿಗೆ ಕರೆ ನೀಡಿದರು. ಮಣ್ಣಿನ ಪಾತ್ರೆ (ಮಡಿಕೆ) ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡುವುದರಿಂದ ಆಗುವ ಅನುಕೂಲಗಳ ಬಗ್ಗೆ ತಿಳಿಸಿದರು. ನಂತರ ಮಕ್ಕಳ ತೂಕ ಎತ್ತರ ಪರಿಶೀಲಿಸಿ ಆರೋಗ್ಯವಂತ ಬೆಳವಣಿಗೆಯನ್ನು ಒಳಗೊಂಡ ಅಂಗನವಾಡಿ ಮಕ್ಕಳಿಗೆ ಕೆ. ನಿಡುಗಡೆ ಗ್ರಾಮ ಪಂಚಾಯಿತಿ ಸದಸ್ಯ ಡೀನ್ ಬೋಪಣ್ಣ ಅವರಿಂದ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ, ಜಿಲ್ಲಾ ಮಹಿಳಾ ಸಬಲೀಕರಣ ಘಟಕದ, ಜೆಂಡರ್ ಸ್ಪೆಷಲೀಸ್ಟ್ ಕೇಶಿನಿ ಎಸ್.ಆರ್. ಮಾತನಾಡಿ ಮಹಿಳೆಯರಿಗಾಗಿ ಜಿಲ್ಲಾ ಮಹಿಳಾ ಸಬಲೀಕರಣ ಘಟಕವಿದ್ದು ಮಹಿಳೆಯರಿಗಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು. ೧೦೯೮ ಮಕ್ಕಳ ಸಹಾಯವಾಣಿ, ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷತೆ ಮತ್ತು ಭದ್ರತೆಗಾಗಿ ಓಂಕಾರೇಶ್ವರ ದೇವಸ್ಥಾನದ ಹಿಂಭಾಗದಲ್ಲಿ, ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ, ೧೮೧ ಮಹಿಳಾ ಸಹಾಯವಾಣಿ, ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಹೊರಾಂಗಣದಲ್ಲಿರುವ ಸಖಿ ಒನ್ ಸ್ಟಾಪ್ ಸೆಂಟರ್ ಇದ್ದು, ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಳ್ಳುವಂತೆ ತಿಳಿಸಿದರು. ಹಿರಿಯ ನಾಗರಿಕರು ಮತ್ತು ವಿಧವೆಯರಿಗೆ ಇರುವ ಪಿಂಚಣಿ ಸೌಲಭ್ಯಗಳಿಗೆ ನಾಡಕಚೇರಿ ಮತ್ತು ಗ್ರಾಮ ಒನ್ ಸೆಂಟರ್ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೆ. ಬಾಡಗ ಗ್ರಾಮ ಪಂಚಾಯಿತಿ ಸದಸ್ಯೆ ಜಾನ್ಸಿ, ಅಂಗನವಾಡಿ ಕಾರ್ಯಕರ್ತೆಯರಾದ ರಾಣಿ, ಧರಣಿ, ಹರಿಣಿ, ಸಹಾಯಕಿ ಸಾವಿತ್ರಿ ಹಾಜರಿದ್ದರು.