ಮಡಿಕೇರಿ,ಸೆ.೧೯: ಮಡಿಕೇರಿ ನಗರಸಭಾ ಕಚೇರಿಗೆ ಇಂದು ದಿಢೀರನೇ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಕಡತಗಳ ಪರಿಶೀಲನೆ ಮಾಡಿದರು.
ಇಂದು ಬೆಳಿಗ್ಗೆ ದಿಢೀರನೇ ಕಚೇರಿಗೆ ಭೇಟಿ ನೀಡಿ ಹಲವು ಸಮಯಗಳಿಂದ ವಿಲೇವಾರಿ ಆಗದೆ ಬಾಕಿ ಉಳಿದಿರುವ ಕಡತಗಳನ್ನು ಪರಿಶೀಲಿಸಿ ಪೌರಾಯುಕ್ತ ರಮೇಶ್ ಹಾಗೂ ಸಿಬ್ಬಂದಿಗಳಿAದ ಮಾಹಿತಿ ಪಡೆದರು. ಕಚೇರಿ ಒಳಗಡೆ ಬಾಗಿಲು ಹಾಕಿಕೊಂಡು ಪರಿಶೀಲನೆ ಮಾಡುತಿದ್ದುದರಿಂದ ಇಂದು ಸಾರ್ವಜನಿಕರಿಗೆ ಕಚೇರಿ ಭೇಟಿಗೆ ಅವಕಾಶವಿರಲಿಲ್ಲ. ಸಿಬ್ಬಂದಿಗಳೂ ಕೂಡ ಹೊರಗಡೆ ಹೋಗುವಂತಿರಲಿಲ್ಲ. ಲೋಕಾಯುಕ್ತ ಅಧಿಕಾರಿಗಳು ಕೂಡ ಮಧ್ಯಾಹ್ನದ ಭೋಜನವನ್ನು ಕಚೇರಿಗೆ ತರಿಸಿಕೊಂಡು ಊಟ ಮಾಡಿದರು. ಸಂಜೆಗತ್ತಲವರೆಗೂ ಕಡತಗಳ ಪರಿಶೀಲನೆ ಕಾರ್ಯ ನಡೆಯಿತು.
ಲೋಕಾಯುಕ್ತ ಮಡಿಕೇರಿ ವಿಭಾಗ ಡಿವೈಎಸ್ಪಿ ದಿನಕರ್ ಶೆಟ್ಟಿ, ನಿರೀಕ್ಷಕರುಗಳಾದ ಲೋಕೇಶ್, ವೀಣಾ ನಾಯಕ್, ಮೈಸೂರು ಡಿವೈಎಸ್ಪಿ ವೆಂಕಟೇಶ್, ಚಾಮರಾಜನಗರ ನಿರೀಕ್ಷಕ ಗಿರೀಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದರು.