.
ಮಡಿಕೇರಿ, ಸೆ. ೨೦ : ಹತ್ತು ವರ್ಷಗಳ ಹಿಂದೆ ಕೊಡಗಿನ ವಿವಿಧ ರೆಸಾರ್ಟ್ಗಳಲ್ಲಿ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಕೆ.ಆರ್. ಪೇಟೆಯ ರಮೇಶ (೪೭) ಎಂಬಾತನನ್ನು ಕೊಡಗು ಜಿಲ್ಲಾ ಪೊಲೀಸರು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಮೇಶ ೨೦೧೬ರಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನ್ಯಾಯಾಧೀಶರೊಬ್ಬರ ಮನೆಗೆ ನುಗ್ಗಿ ಅವರನ್ನು ಕಟ್ಟಿಹಾಕಿ ದರೋಡೆ ಮಾಡಿದ್ದ ಪ್ರಕರಣದಲ್ಲಿ ಕೂಡ ಆರೋಪಿಯಾಗಿದ್ದಾನೆ. ಈತ ಕುಪ್ಪಿ ನಾಗ ಅಲಿಯಾಸ್ ಬಾಂಬೆ ನಾಗನ ಸಹಚರನಾಗಿದ್ದು, ೨೦೧೫ರಲ್ಲಿ ಕೊಡಗಿನ ರೆಸಾರ್ಟ್ಗಳಾದ ಮಹೇಂದ್ರ, ತಾಜ್, ಹೆರಿಟೇಜ್, ಕೂರ್ಗ್ ಲಗೂನ್, ಜಂಗಲ್ ಕ್ಯಾಂಪ್, ಅಮನವನ, ಆರೆಂಜ್ ಕೌಂಟಿ, ಪೋರ್ಕ್ಯುಫೈನ್, ಅಂಬಟ್ಟಿ ರೆಸಾರ್ಟ್ಗಳಲ್ಲೂ ಕಳವು ಮಾಡಿದ್ದು, ಈತನ ಸಹಚರರಾದ ಕುಪ್ಪಿ ನಾಗ, ಜಗ್ಗ, ಕೃಷ್ಣ @ ಗಜ, ಅಯ್ಯಪ್ಪ ಹಾಗೂ ವಕೀಲ ಮಂಜುನಾಥ್ ಎಂಬವರುಗಳನ್ನು ಬಂಧಿಸಲಾಗಿತ್ತು. ಆದರೆ ಆರೋಪಿ ರಮೇಶ ಮಾತ್ರ ಮುಂಬೈಗೆ ತೆರಳಿ ತಲೆಮರೆಸಿಕೊಂಡಿದ್ದ. ಈತನ ಪತ್ತೆಗೆ ಎಸ್ಪಿ ಕೆ. ರಾಮರಾಜನ್ ಹಾಗೂ ಎಎಸ್ಪಿ ದಿನೇಶ್ ಕುಮಾರ್ ತಂಡ ರಚನೆ ಮಾಡಿದ್ದರು. ಕುಶಾಲನಗರ ಇನ್ಸ್ಪೆಕ್ಟರ್ ದಿನೇಶ್ ಕುಮಾರ್, ಮಡಿಕೇರಿ ಗ್ರಾಮಾಂತರ ಇನ್ಸ್ಪೆಕ್ಟರ್ ಚಂದ್ರ ಶೇಖರ್ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಆರೋಪಿ ರಮೇಶ ಕುಶಾಲನಗರದಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಆತನನ್ನು ಬಂಧಿಸಿದ್ದಾರೆ.