ಪೊನ್ನಂಪೇಟೆ, ಸೆ. ೨೦: ಪ್ರಸ್ತುತ ವರ್ಷ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ, ಗೋಣಿಕೊಪ್ಪಲು ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಚ್.ಕೆ. ಕುಮಾರ್ ಅವರನ್ನು ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಎಂ.ಎಸ್. ಕುಶಾಲಪ್ಪ ಅವರು ಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿ, ಕುಮಾರ್ ಅವರಿಗೆ ರಾಜ್ಯ ಪ್ರಶಸ್ತಿ ಬಂದಿರುವುದು ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆ ತಂದಿದೆ. ಶಾಲೆಯನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಿರುವ ಇವರ ಕಾರ್ಯ ಶ್ಲಾಘನೀಯ ಎಂದರು. ಈ ಸಂದರ್ಭ ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆ ಸ್ಥಾಪಕ ಅಧ್ಯಕ್ಷ ಹಾಗೂ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕಾಂಗ್ರೆಸ್ ಮುಖಂಡ ಗಿರೀಶ್ ಹಾಜರಿದ್ದರು.