ಸುಂಟಿಕೊಪ್ಪ, ಸೆ. ೨೩: ಹೋಬಳಿ ವ್ಯಾಪ್ತಿಯ ವಿವಿಧ ದೇವಾಲಯಗಳಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತಿದೆ.
ಇಲ್ಲಿನ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದಲ್ಲಿ ದೇವಿಗೆ ನೈವೇದ್ಯ ಪೂಜೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆತಿದೆ.
ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ್ ಉಡುಪ ಅವರ ನೇತೃತ್ವದಲ್ಲಿ ದೇವಿಗೆ ಕುಂಕುಮಾರ್ಚನೆ, ಪುಷ್ಪ ಅರ್ಚನೆ, ದೀಪರಾಧನೆ ನಡೆಯಿತು.
ಸಂಜೆ ವಿಶೇಷ ಪೂಜೆ, ವಿಧಿ ವಿಧಾನಗಳು ನಡೆದವು. ನಂತರ ನವರಾತ್ರಿಯ ಮೊದಲ ದಿನವಾದ ಸೋಮವಾರ ದೇವಿಗೆ ಅರಿಶಿಣ ಅಲಂಕಾರ ಮಾಡುವುದರ ಮೂಲಕ ದೇವಾಲಯದಲ್ಲಿ ಭಕ್ತರಿಗೆ ಪೂಜೆಗೆ ಅವಕಾಶ ನೀಡಲಾಯಿತು.
ಇಲ್ಲಿನ ಮಾದಾಪುರ ರಸ್ತೆಯಲ್ಲಿರುವ ವೃಕ್ಷೋದ್ಭವ ಮಹಾಗಣಪತಿ ದೇವಾಲಯದಲ್ಲಿ ನವರಾತ್ರಿ ಮೊದಲ ದಿನ ದೇವಿಯರಿಗೆ ವಿಶೇಷ ಪೂಜೆ, ಮಹಾ ಪೂಜೆ, ವಿಲ್ಯದೆಲೆ ಅರ್ಚನೆಯ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಸಮೀಪದ ಕಂಬಿಬಾಣೆ ರಾಮ ಮತ್ತು ಚಾಮುಂಡೇಶ್ವರಿ ದೇವಾಲಯದಲ್ಲಿ ೭೦ನೇ ವರ್ಷದ ನವರಾತ್ರಿ ಅಂಗವಾಗಿ ಗಣಹೋಮದೊಂದಿಗೆ ಚಾಲನೆ ನೀಡಲಾಯಿತು. ಆರಾಧನೆ, ದೀಪಾಲಂಕಾರ, ನೈವೇದ್ಯ ಪೂಜೆಗಳು ನಡೆದವು.
ತಾ.೨೪ರಂದು (ಇಂದು) ರಾತ್ರಿ ಭೂತನಕಾಡು ಓಂ ಶಕ್ತಿ ತಂಡದಿAದ ಭಜನಾ ಕಾರ್ಯಕ್ರಮ, ಶುಕ್ತವಾರ ಕುಶಾಲನಗರ ತಂಡದಿAದ ಭಜನೆ, ಶನಿವಾರ ಬೆಳಿಗ್ಗೆ ದುರ್ಗಾ ಹೋಮ ನಡೆಯಲಿದೆ.
ಕೊಡಗರಹಳ್ಳಿ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ನವರಾತ್ರಿ ಪೂಜೆಯ ಮೊದಲ ದಿನ ವಿಶೇಷ ಪೂಜೆಗಳು ನಡೆದವು. ಶ್ರೀರಂಗಪೂಜೆ, ಪಂಚಾಮೃತ ಅಭಿಷೇಕಗಳು ನಡೆದು ನಂತರ ಮಹಾಪೂಜೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆದವು.