ಚೆಯ್ಯಂಡಾಣೆ, ಸೆ. ೨೩: ಸಮೀಪದ ಕರಡ ಅಂಗನವಾಡಿ ಕೇಂದ್ರದಲ್ಲಿ ಕರಡ ಹಾಗೂ ಕೀಮಲೆಕಾಡು ಅಂಗನವಾಡಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಉದ್ಘಾಟಿಸಿ ಮಾತನಾಡಿ, ಈಗಿನ ಕಾಲದಲ್ಲಿ ಸ್ಥಳೀಯವಾಗಿ ಬೆಳೆದಿರುವ ಪೌಷ್ಟಿಕಾಂಶ ಇರುವ ತರಕಾರಿ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ಸೇವನೆ ಮಾಡದಿರುವ ಪರಿಸ್ಥಿತಿ ಜನರಲ್ಲಿ ನಿರ್ಮಾಣವಾಗಿದೆ. ಮಕ್ಕಳು ಹಾಗೂ ತಾಯಂದಿರು ಜಂಕ್ ಫುಡ್ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದು ಇದರಿಂದ ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವಂತಾಗಿದೆ. ಇಂತಹ ಕಾರ್ಯಕ್ರಮ ಆಯೋಜನೆಯಿಂದ ಜನರಿಗೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಬಳಕೆಯಿಂದ ಉಂಟಾಗುವ ಉಪಯೋಗಗಳ ಕುರಿತು ಮಾಹಿತಿ ದೊರಕಲಿದೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಅರಪಟ್ಟು ಸರಕಾರಿ ಆಯುರ್ವೇದಿಕ್ ಆಸ್ಪತ್ರೆಯ ಡಾ. ಶುಭ ಪೋಷಣ್ ಅಭಿಯಾನದ ಕುರಿತು ಮಾತನಾಡಿ, ಔಷಧಿಗಳೇ ನಮ್ಮ ಆಹಾರ ಆಗಬಾರದು. ಪೌಷ್ಟಿಕಾಂಶ ಹೊಂದಿರುವ ಆಹಾರ ಪದಾರ್ಥಗಳನ್ನು ನಮ್ಮ ನಿತ್ಯ ಜೀವನದಲ್ಲಿ ಬಳಸುವುದರಿಂದ ಅದರಲ್ಲಿರುವ ಔಷಧಿ ಗುಣಗಳು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಪೌಷ್ಟಿಕಾಂಶ ಹೊಂದಿರುವ ತರಕಾರಿ, ಇನ್ನಿತರ ಆಹಾರ ಪದಾರ್ಥಗಳನ್ನು ನಿತ್ಯ ಜೀವನದಲ್ಲಿ ಬಳಸಿ ಆರೋಗ್ಯವಂತರಾಗಬೇಕೆAದು ತಿಳಿಸಿದರು.
ಚೆಯ್ಯಂಡಾಣೆ ಆರೋಗ್ಯ ಕೇಂದ್ರದ ಹಿರಿಯ ಸಹಾಯಕಿ ಕನಕಾವತಿ ಪೌಷ್ಟಿಕಾಂಶದ ಕುರಿತು ಮಾಹಿತಿ ನೀಡಿ ಮಾತನಾಡಿದರು. ಇದೆ ಸಂದರ್ಭ ಇಬ್ಬರು ಗರ್ಭಿಯರಿಗೆ ಸೀಮಂತ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭ ಸಂಜೀವಿನಿ ಒಕ್ಕೂಟದ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು. ಕೀಮಲೆಕಾಡು ಅಂಗನವಾಡಿ ಕಾರ್ಯಕರ್ತೆ ಅಶ್ವಿನಿ ಪ್ರಾರ್ಥಿಸಿ, ಆಶಾ ಕಾರ್ಯಕರ್ತೆ ಪುಷ್ಪಲತ ಸ್ವಾಗತಿಸಿ, ಕರಡ ಅಂಗನವಾಡಿ ಕಾರ್ಯಕರ್ತೆ ಈಶ್ವರಿ ನಿರೂಪಿಸಿ, ಗ್ರಂಥಾಪಾಲಕಿ ರೆನಿ ಬಿಬ್ಬು ವಂದಿಸಿದರು.