ಶನಿವಾರಸಂತೆ: ಸೆ. ೨೩: ವಿಶ್ವಗುರು ಬಸವಣ್ಣನವರ ಆದರ್ಶ ಹಾಗೂ ತತ್ವಗಳು ನಾಡಿನ ಜನಮಾನಸಕ್ಕೆ ತಲುಪಿಸುವ ಮಹತ್ಕಾರ್ಯವನ್ನು ಮಠಾಧಿಪತಿಗಳ ಒಕ್ಕೂಟ ಮಾಡುತ್ತಿದ್ದು ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ ಎಂದು ಗದಗ ಜಿಲ್ಲೆಯ ಡಂಬಳದ ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ಕೊಡ್ಲಿಪೇಟೆಯಲ್ಲಿ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನ್ನಾಗಿ ಘೋಷಿಸಿದರೆ ಸಾಲದು. ನಾಡಿನಾದ್ಯಂತ ಬಸವಣ್ಣನವರ ಆಶಯಗಳನ್ನು ಪ್ರಚಾರಪಡಿಸುವ ಕಾರ್ಯವೂ ಆಗಬೇಕಿದೆ. ಹೆಣ್ಣುಮಕ್ಕಳಿಗೆ ಪ್ರಜಾಸತ್ತಾತ್ಮಕ ಧಾರ್ಮಿಕ ಸ್ವಾತಂತ್ರ‍್ಯ ತಂದುಕೊಟ್ಟ ಪರಿಣಾಮ ಹೆಣ್ಣುಮಕ್ಕಳು ಇಂದು ವಿಶ್ವ ವ್ಯಾಪಿ ಸಾಧನೆಯ ಶಿಖರ ಏರಲು ಸಾಧ್ಯವಾಗಿದೆ. ಹೆಣ್ಣುಮಕ್ಕಳಿಗೆ ಸಂಸ್ಕಾರ ತಿಳಿಸಿ ಅವರಲ್ಲಿ ಸರ್ವಸಮಾನತೆಯ ಮೌಲ್ಯಗಳನ್ನು ತಂದುಕೊಟ್ಟ ವಿಶ್ವಗುರು ಬಸವಣ್ಣ ಸಮಾಜದಲ್ಲಿ ಮೇಲು-ಕೀಳು ಬೇಧಗಳನ್ನು ದೂರ ಮಾಡಿದ ಸತ್ಪುರುಷ. ಬಸವೇಶ್ವರರ ಆದರ್ಶಗಳನ್ನು ಶಾಲಾ-ಕಾಲೇಜುಗಳಲ್ಲಿ ಹಾಗೂ ಜನಮಾನಸದಲ್ಲಿ ಮೂಡಿಸುವ ಕಾರ್ಯ ಸರ್ಕಾರದಿಂದ ಆಗಬೇಕಿದೆ ಎಂದು ಶ್ರೀಗಳು ಹೇಳಿದರು.
ಭಾಲ್ಕಿಯ ಹಿರೇಮಠ ಸಂಸ್ಥಾನ ಮಠದ ನಾಡೋಜ ಬಸವಲಿಂಗ ಪಟ್ಟದೇವರು ಮಾತನಾಡಿ, ಬಸವ ಧರ್ಮ ಹಾಗೂ ಬಸವಣ್ಣನವರ ಆದರ್ಶಗಳು ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಲ್ಲ. ಎಲ್ಲಾ ಜನಸಮುದಾಯ ಅಪ್ಪುವ-ಒಪ್ಪುವ ವಿಶ್ವವ್ಯಾಪಿ ವಿಚಾರವಿದು. ಬಸವಣ್ಣನವರ ಆದರ್ಶಗಳನ್ನು ಪಾಲಿಸುವವರು ಕಡ್ಡಾಯವಾಗಿ ಅಂಗದ ಮೇಲೆ ಲಿಂಗ ಧರಿಸಬೇಕು.ಇಂದಿನ ಮಕ್ಕಳು ಹಾಗೂ ತಾಯಂದಿರು ಮೊಬೈಲ್ ಬದಲು ವಚನ ಪುಸ್ತಕಗಳನ್ನು ಹಿಡಿದು ವಚನಗಳ ಸಾರವನ್ನು ಅರಿಯಲು ಶ್ರಮ ವಹಿಸಿದಲ್ಲಿ ಭವಿಷ್ಯದ ಸಮಾಜ ಸುಸಂಸ್ಕೃತ ಸಮಾಜವಾಗುತ್ತದೆ ಎಂದರು.
ಕೂಡಲ ಸಂಗಮದ ಬಸವಧರ್ಮ ಪೀಠದ ಮಾತೆ ಡಾ. ಮಾತೆ ಗಂಗಾ ಮಾತಾಜಿ ಮಾತನಾಡಿ, ವಚನಗಳ ಅಧ್ಯಯನ ಮನುಷ್ಯನನ್ನು ಪರಿಪೂರ್ಣಗೊಳಿಸುತ್ತದೆ. ದೈಹಿಕವಾಗಿ, ಮಾನಸಿಕವಾಗಿ, ಧಾರ್ಮಿಕವಾಗಿ ಆರೋಗ್ಯಗೊಳಿಸುವ ಹಾಗೂ ಸರ್ವಾಂಗ ಪರಿಪೂರ್ಣಗೊಳಿಸುವ ಶಕ್ತಿ ವಚನ ಸಾಹಿತ್ಯಕ್ಕೆ ಮಾತ್ರವಿದೆ.
೧೨ನೇ ಶತಮಾನದಲ್ಲಿ ಇದ್ದಂತಹ ಸಾಮಾಜಿಕ ಕ್ಷೋಭೆಗಳ ವಿರುದ್ಧ ಸಮರ ಸಾರಿದ ಬಾಲಕ ಬಸವಣ್ಣ ಇವನಾರವ ಎನ್ನದೇ ಎಲ್ಲರನ್ನೂ ಇವ ನಮ್ಮವ ಎಂದು ಸಕಲ ಜೀವಗಳಿಗೂ ಲೇಸನ್ನೇ ಬಯಸಿದವರು ಬಸವಣ್ಣ ಎಂದರು.
ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಕನ್ನಡ ಭಾಷೆಗೆ ದೇವಭಾಷೆಯ ಸ್ವರೂಪ ತಂದು ಸಾಮಾಜಿಕ ಕ್ರಾಂತಿಯ ಮೂಲಕ ಸಮಾಜದ ಅಂಕು-ಡೊAಕು ತಿದ್ದಿದ ಹಾಗೂ ಸಮ ಸಮಾಜ ಕಟ್ಟಿದ ಬಸವಣ್ಣ ವಿಶ್ವದ ಸಾಂಸ್ಕೃತಿಕ ನಾಯಕ ಎಂದರು.
ಕೊಡಗು ವಿಶ್ವವಿದ್ಯಾಲಯ ಕುಲಪತಿ ಡಾ. ಅಶೋಕ್ ಸಂಗಪ್ಪ ಆಲೂರ ಮಾತನಾಡಿ, ನಾಡಿನಾದ್ಯಂತ ಬಸವ ಬೆಳಕಿನ ಕಿರಣಗಳನ್ನು ಸೂಸುವ ಮೂಲಕ ನಾಡನ್ನು ಶರಣ ಸಂಸ್ಕೃತಿಮಯ ಮಾಡುತ್ತಿರುವ ಮಠಾಧಿಪತಿಗಳ ಕೈಂಕರ್ಯ ಶ್ಲಾಘನೀಯ. ವಿಶ್ವ ಕಂಡ ಮಾನವತಾವಾದಿ ಬಸವಣ್ಣನವರ ಶ್ರೇಷ್ಠ ವಿಚಾರಧಾರೆಗಳ ಅರಿವು ಮೂಡಿಸಲು ಕೊಡಗು ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠವನ್ನು ಆರಂಭಿಸು ತ್ತಿರುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಕಲ್ಬುರ್ಗಿಯ ಕೌಲಗದ ವೀರಸಿದ್ಧೇಶ್ವರ ದೇವರು, ಗವಿಮಠದ ಬಸವಲಿಂಗ ಮಹಾಸ್ವಾಮೀಜಿ, ಬಿಲ್ವಮಠದ ಮಹಾಂತ ಸಿದ್ಧೇಶ್ವರ ಸ್ವಾಮೀಜಿ, ಬೆಳಗಾವಿಯ ಶಿವಬಸವ ದೇವರು, ಬಸವಕಲ್ಯಾಣದ ಬಸವದೇವರು, ರಾಯಚೂರಿನ ವೀರಭದ್ರ ಶಾಸ್ತಿç, ಕೊಡಗು ಕನ್ನಡ ಮಠದ ಪೀಠಾಧ್ಯಕ್ಷ ಚನ್ನಬಸವ ದೇಶಕೇಂದ್ರ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ, ಶಿಡಿಗಳಲೆಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕಲ್ಲಳ್ಳಿಮಠದ ರುದ್ರಮುನಿ ಸ್ವಾಮೀಜಿ, ಸೋಮವಾರಪೇಟೆ ವಿರಕ್ತಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ. ನಟರಾಜ್, ಖಜಾಂಚಿ ಕೆ.ಪಿ. ಪರಮೇಶ್, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ವಿ. ಶಿವಪ್ಪ, ಪ್ರಧಾನ ಕಾರ್ಯದರ್ಶಿ ಶಾಂಬಶಿವ ಮೂರ್ತಿ, ಖಜಾಂಚಿ ಉದಯಕುಮಾರ್, ಕೊಡ್ಲಿಪೇಟೆ ಗಂಗಾ ವೀರಶೈವ ಮಹಿಳಾ ಸಮಾಜದ ಅಧ್ಯಕ್ಷೆ ಎಸ್. ಮಂಜುಳಾ ಸುರೇಶ್, ಸಮಾಜದ ಪ್ರಮುಖರಾದ ರಾಜೇಶ್ವರಿ ನಾಗರಾಜ್, ಮಮತಾ ಸತೀಶ್, ಕೊಡಗು ವಿವಿ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮ್ಮದ್, ಕೊಡ್ಲಿಪೇಟೆ ಉಪನ್ಯಾಸಕ ಎನ್.ಎಂ. ಚಂದ್ರಶೇಖರ್ ಉಪಸ್ಥಿತರಿದ್ದರು.
ಎನ್.ಎಂ. ಚಂದ್ರಶೇಖರ್ ಸ್ವಾಗತಿಸಿ, ಡಾ. ಜಮೀರ್ ಅಹಮ್ಮದ್ ವಂದಿಸಿದರು.